April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

25 ಕೋಟಿ ವೆಚ್ಚದಲ್ಲಿ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ: ಮುಂದಿನ ಮಾರ್ಚ್ ತಿಂಗಳಿನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಂಕಲ್ಪ

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಳಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದ್ದು ಸೀಮೆ ದೇವಾಲಯವಾಗಿದ್ದು ಹರಿಹರ ಸಂಗಮ ಕ್ಷೇತ್ರವಾಗಿದ್ದು ಧನ್ವಂತರಿ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಹೊಂದಿದೆ. ಶ್ರೀ ಕ್ಷೇತ್ರದಲ್ಲಿ 2016 ನೇ ಇಸವಿಯಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯ ಪ್ರಕಾರವಾಗಿ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳನ್ನು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠ, ಇವರ ಗೌರವಾಧ್ಯಕ್ಷತೆ ಹಾಗೂ ಪೂಜ್ಯ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಮಾರ್ಗದರ್ಶನದಲ್ಲಿ ಶ್ರೀ ರಾಧಾಕೃಷ್ಣ ಯಡಪ್ಪಾಡಿತ್ತಾಯರ ಅಧ್ಯಕ್ಷತೆಯೊಂದಿಗೆ 2020 ನೇ ಫೆಬ್ರವರಿ ಯಲ್ಲಿ ರಚಿಸಿದ ಜೀರ್ಣೋದ್ದಾರ ಸಮಿತಿಯು 01-05-2020 ರಂದು ಪೂಜ್ಯ ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ನಿಧಿ ಸಮರ್ಪಣೆಯೊಂದಿಗೆ ಪ್ರಾರಂಭಿಸಿರುತ್ತದೆ. ಶ್ರೀ ದೇವಳದ ಅಭಿವೃದ್ಧಿಯನ್ನು ಸುಮಾರು ಅಂದಾಜು 25 ಕೋಟಿ ವೆಚ್ಚದಲ್ಲಿ ಮಾಡುವುದಾಗಿ ಯೋಜನಾ ನಕ್ಷೆ ತಯಾರಿಸಲಾಗಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೇ|ಮೂ| ಬಾಲಕೃಷ್ಣ ಕೆದಿಲ್ಲಾಯ ಹೇಳಿದರು.

ಅವರು ಆ.17 ರಂದು ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.


ಜೀರ್ಣೋದ್ಧಾರ ಕಾರ್ಯದಲ್ಲಿ ಶ್ರೀ ವೈದ್ಯನಾಥೇಶ್ವರ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಶ್ರೀ ವಿಷ್ಣುಮೂರ್ತಿ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಶ್ರೀ ಗಣಪತಿ ದೇವರ ಗರ್ಭಗುಡಿ, ಶ್ರೀ ಉಳ್ಳಾಲ್ತಿ ಅಮ್ಮನವರ ಗರ್ಭಗುಡಿ, ಶ್ರೀ ಶಾಸ್ತಾರ ದೇವರ ಗರ್ಭಗುಡಿ, ಶ್ರೀ ನೀಲಕಂಠ ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಮಧ್ಯಮಂಟಪ, ಸುತ್ತುಪೌಳಿ, ಪುಷ್ಕರಣಿ, ದೈವಗಳ ನೂತನ ಕಟ್ಟೆಗಳು, ನೂತನ ಧ್ವಜಸ್ತಂಭ, ನೂತನ ರಾಜಗೋಪುರ, ನೂತನ ಪುಷ್ಕರಣಿ, ಅರ್ಚಕರ ವಸತಿ ಗೃಹಗಳು, ಭೋಜನ ಶಾಲೆ ನೂತನ ಬ್ರಹ್ಮರಥ, ರಥಬೀದಿ, ವಿಶ್ರಾಂತಿ ಗೃಹ, ಕಲ್ಯಾಣ ಮಂಟಪ ಮುಂತಾದ ಅನೇಕ ಯೋಜನೆಗಳ ನೀಲನಕ್ಷೆಯನ್ನ ಸಿದ್ಧಪಡಿಸಲಾಗಿದ್ದು ಸಂಪೂರ್ಣ ಶಿಲಾಮಯ ದೇವಳದ ಈ ಎಲ್ಲಾ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ. ದಿನಾಂಕ 14-12-2022 ರಂದು ಶ್ರೀ ದೇವಳದ ತಂತ್ರಿಗಳಾದ ಪೂಜ್ಯ ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಅನುಜ್ಞಾ ಕಲಶದೊಂದಿಗೆ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ.

ದಿನಾಂಕ 27-01-2023 ರಂದು ಪೂಜ್ಯ ಪೇಜಾವರ ಶ್ರೀಗಳಿಂದ ನೂತನ ಗರ್ಭಗುಡಿಗೆ ಶಿಲಾನ್ಯಾಸ ನಡೆದು ಫೆ.3 ರಂದು ತಂತ್ರಿಗಳ ನೇತೃತ್ವದಲ್ಲಿ ಪಾದುಕಾನ್ಯಾಸ ಹಾಗೂ ಜ. 10 ರಂದು ಗರ್ಭನ್ಯಾಸ ಕಾರ್ಯಕ್ರಮ ನಡೆದಿರುತ್ತದೆ. ದೇವಾಲಯದ ಜೀರ್ಣೋದ್ಧಾರದ ಕಾರ್ಯಗಳಿಗೆ ತಗಲುವ ವೆಚ್ಚವನ್ನು ಸೀಮೆಯ ಹಾಗೂ ಊರ ಪರವೂರ ಭಕ್ತರ ಸಹಕಾರ ಮತ್ತು ಸರಕಾರದ ಅನುದಾನ ಪಡೆದು ನಡೆಸುವುದಾಗಿರುತ್ತದೆ. ಈಗಾಗಲೇ ಸರಕಾರದ ವತಿಯಿಂದ ಶಾಸಕ ಹರೀಶ್ ಪೂಂಜರವರ ಪ್ರಯತ್ನದಿಂದ ರೂ. 1 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.

ಇನ್ನು ಮುಂದಕ್ಕೆ ಸೀಮೆಗೆ ಸಂಬಂದಪಟ್ಟ ಭಕ್ತರಿಂದ ನಿಧಿ ಸಂಗ್ರಹಕ್ಕಾಗಿ ಪ್ರತ್ಯೇಕವಾದ ಸಮಿತಿಗಳನ್ನು ರಚಿಸಲಾಗಿದೆ. 2024ನೇ ಇಸವಿ ಮಾರ್ಚಿ ತಿಂಗಳಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನಡೆಸುವುದಾಗಿ ಸಂಕಲ್ಪಿಸಲಾಗಿದೆ. ದೇವಾಲಯದ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಅ೦ದಾಜು 25 ಕೋಟಿಗೂ ಮಿಕ್ಕಿದ ವೆಚ್ಚದಲ್ಲಿ ತ್ವರಿತವಾಗಿ ನಡೆಯಬೇಕಾಗಿದ್ದು ಊರಪರವೂರ ಭಕ್ತಾದಿಗಳ ಸಂಪೂರ್ಣ ಸಹಕಾರವನ್ನು ಶ್ರೀ ದೇವಳದಿಂದ ಅಪೇಕ್ಷಿಸುತ್ತೇವೆ. ಜಿಲ್ಲೆಯಲ್ಲೇ ಸಾವಿರಾರು ವರ್ಷಗಳ ಇತಿಹಾಸ ಮತ್ತು ಅಪೂರ್ವ ಕಾರಣಿಕವನ್ನು ಹೊಂದಿರುವ ನಮ್ಮ ಈ ಧನ್ವಂತರಿ ಕ್ಷೇತ್ರದ ಅಭಿವೃದ್ಧಿಗೆ ಭಕ್ತಜನರ ಸಂಪೂರ್ಣ ಸಹಕಾರವನ್ನು ಕೋರುತ್ತಿದ್ದೇವೆ.

ಪತ್ರಿಕಾಗೋಷ್ಠಿಯಲ್ಲಿ ಪವಿತ್ರಪಾಣಿ ರಾಧಾಕೃಷ್ಣ ಎಡಪಡಿತ್ತಾಯ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸುಬ್ರಹ್ಮಣ್ಯ ಉಪ್ಪಾರ್ಣ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಶಗ್ರಿತ್ತಾಯ ಸ್ವಾಗತಿಸಿದ್ದರು.

Related posts

ಉಜಿರೆ ರತ್ನಮಾನಸ ನಿಲಯದಲ್ಲಿ ಕ್ರಿಸ್ಮಸ್ ಆಚರಣೆ ಮತ್ತು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಮಾಹಿತಿ

Suddi Udaya

ಅರಸಿನಮಕ್ಕಿ ಹೊಸ್ತೋಟ ಶಾಲಾ ಬಳಿ ಮರ ಬಿದ್ದು ರಸ್ತೆ ತಡೆ : ಅರಸಿನಮಕ್ಕಿ ನವಶಕ್ತಿಯ ಆಟೋ ಚಾಲಕ ಮಾಲಕರ ಸಂಘದ ಸದಸ್ಯರಿಂದ ತೆರವು

Suddi Udaya

ಅ.22 ರಂದು ಬಳಂಜದಲ್ಲಿ ವೈಭವದ ಶಾರದಾ ಮಹೋತ್ಸವ: ಪೂರ್ವತಯಾರಿ ಬಗ್ಗೆ ಸಮಾಲೋಚನೆ ಸಭೆ

Suddi Udaya

ಉಜಿರೆ: ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya

ಉಜಿರೆ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇ.ಸಿ. ವಿಭಾಗದಿಂದ ಸರ್ಕ್ಯೂಟ್ ಎಕ್ಸ್ ಪೋ 2024

Suddi Udaya

ಕಾರಿನಲ್ಲಿ ಮಲಗಿದ್ದವರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದ ಘಟನೆ: ಗಾಯಗೊಂಡ ಮಿತ್ತಬಾಗಿಲು ಸಂಶುದ್ದೀನ್ ಮಂಗಳೂರು ಆಸ್ಪತ್ರೆಯಲ್ಲಿ ದಾಖಲು

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ