ಉಜಿರೆ: ರೋಗಿ ತಾನೇ ಉಸಿರಾಡಲು ಆಗದ ಗಂಭೀರವಾದ ಅನಾರೋಗ್ಯದ ಸಂದರ್ಭದಲ್ಲಿ ಕೃತಕ ಉಸಿರಾಟದ ಅನಿವಾರ್ಯತೆ ಇರುತ್ತದೆ. ಯಾಂತ್ರಿಕ ವಾತಾಯನವು (ವೆಂಟಿಲೇಟರ್) ತುರ್ತು ಪರಿಸ್ಥಿಯಲ್ಲಿ ರೋಗಿಯ ಜೀವ ಉಳಿಸಬಲ್ಲದು. ಆಸ್ಪತ್ರೆಗಳ ಮೂಲಭೂತ ಸೌಕರ್ಯಗಳಲ್ಲಿ ವೆಂಟೆಲೇಟರ್ ಅತೀ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಈ ಉದ್ದೇಶದಿಂದ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನಿರ್ವಹಣೆಯ ತರಬೇತಿ ಆಯೋಜಿಸಲಾಗಿದೆ ಎಂದು ನಿರ್ದೇಶಕ ಎಂ. ಜನಾರ್ದನ್ ಹೇಳಿದರು.
ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ 9 ಹಾಸಿಗೆಗಳ ಸುಸಜ್ಜಿತ ಐಸಿಯು ಹಾಗೂ 4 ವೆಂಟಿಲೇಟರ್‌ಗಳನ್ನು ಹೊಂದಿದ್ದು, ಡಾ. ಡಿ ವೀರೇಂದ್ರ ಹೆಗ್ಗಡೆಯವರ ನಿರ್ದೇಶನದಂತೆ ಇತ್ತೀಚೆಗೆ ಹೊಸ ತಂತ್ರಜ್ಞಾನ ಹೊಂದಿರುವ 29 ಲಕ್ಷ ಮೌಲ್ಯದ 2 ಬಿಪಿಎಲ್ ಎಲಿಸಾ-600 ವೆಂಟಿಲೇಟರ್‌ಗಳನ್ನು ಅಳವಡಿಸಲಾಗಿದೆ. ಒಟ್ಟು 6 ವೆಂಟಿಲೇಟರ್‌ಗಳನ್ನು ಹೊಂದಿದೆ.
ಹೊಸ ತಂತ್ರಜ್ಞಾನ ಹೊಂದಿರುವ ಈ ವೆಂಟಿಲೇಟರ್‌ನಲ್ಲಿ ವಯಸ್ಕರು, ಮಕ್ಕಳು ಮತ್ತು ನವಜಾತ ಶಿಸುಗಳಿಗೆ ಹೊಂದಾಣಿಕೆಯಾಗುವಂತೆ ಅಲ್ಟ್ರಾ-ಪ್ರೀಮಿಯಂ ಕ್ಲಾಸ್ ವೆಂಟಿಲೇಟರ್‌ನ್ನು ಟ್ರಾಲಿಗೆ ಅಳವಡಿಸಲಾಗಿದೆ. ಇದು ಉತ್ತಮ ಗುಣಮಟ್ಟದ ಉಸಿರಾಟವನ್ನು ಒದಗಿಸುತ್ತದೆ. ಇದರಲ್ಲಿ ಅಳವಡಿಸಿರುವ ಪ್ಯಾರಾಮೀಟರ್ ರೋಗಿಯ ಪರಿಸ್ಥಿತಿಯನ್ನು ಅರ್ಥಗರ್ಭಿತವಾಗಿ ಮತ್ತು ಶೀಘ್ರವಾಗಿ ಗ್ರಹಿಸುವ ತ್ವರಿತ ವೀಕ್ಷಣಾ ತಂತ್ರಜ್ಞಾನವನ್ನು ಹೊಂದಿರುವುದರಿಂದ ರೋಗಿಗೆ ಉಸಿರಾಟದಲ್ಲಿ ವ್ಯತ್ಯಯವಾಗದಂತೆ ನಿಗಾವಹಿಸುತ್ತದೆ.
ಸುಧಾರಿತ ತಂತ್ರಜ್ವಾನ ಹೊಂದಿರುವ ವೆಂಟಿಲೇಟರ್‌ಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತು ವೈದ್ಯರು, ದಾದಿಯರು ಮತ್ತು ಟೆಕ್ನಿಶಿಯನ್‌ಗಳಿಗೆ ಬಿಪಿಎಲ್ ಕಂಪೆನಿಯವರು ತರಬೇತಿ ನಡೆಸಿಕೊಟ್ಟರು ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.