April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಂಗ್ರೇಸ್‌ ಆಡಳಿತ ಸರಕಾರ ರೈತಾಪಿ ವರ್ಗವನ್ನು ನಿರ್ಲಕ್ಷಿಸಿದೆ: ಬಿಜೆಪಿ ಸರಕಾರ ತಂದಿದ್ದ ಹಲವಾರು ರೈತ ಕಲ್ಯಾಣ ಯೋಜನೆಗಳನ್ನು ಕೈ ಬಿಟ್ಟಿರುವುದು ಖಂಡನೀಯ: ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

ಬೆಳ್ತಂಗಡಿ: ಕಾಂಗ್ರೇಸ್‌ ಆಡಳಿತದ ಸರಕಾರ ರೈತಾಪಿ ವರ್ಗವನ್ನು ನಿರ್ಲಕ್ಷಿಸುತ್ತಿದ್ದು, ರೈತ ವಿರೋಧಿ ನೀತಿಯನ್ನು ಹೊಂದಿದೆ. ಬಿಜೆಪಿ ಸರಕಾರ ತಂದಿದ್ದ ಹಲವಾರು ರೈತ ಕಲ್ಯಾಣ ಯೋಜನೆಗಳನ್ನು ಕೈ ಬಿಟ್ಟಿರುವುದು ಖಂಡನೀಯ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಹೇಳಿದ್ದಾರೆ.


ಅವರು ಪತ್ರಿಕಾ ಹೇಳಿಕೆಯನ್ನು ನೀಡಿ ಸರಕಾರದ ಕೃಷಿ ವಿರೋಧಿ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಸರಕಾರವು ರೈತರಿಗೆ ಸಾಗಾಣಿಕೆ ವೆಚ್ಚ, ಮಧ್ಯವರ್ತಿಗಳ ಕಮಿಷನ್‌ ಮತ್ತು ಇತರ ಖರ್ಚುಗಳು ಉಳಿತಾಯವಾಗುವ ದೃಷ್ಟಿಯಿಂದ ಎಪಿಎಂಸಿ ಕಾಯಿದೆಯನ್ನು ತಂದಿತ್ತು. ಇದರಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಆದರೆ ಈ ಸರಕಾರ ಅದನ್ನು ಕೈ ಬಿಟ್ಟು ರೈತರ ಆದಾಯಕ್ಕೆ ಧಕ್ಕೆ ತಂದಿದೆ. ರೈತರು ಬಳಕೆ ಮಾಡುತ್ತಿದ್ದ ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್‌ ದರ ಏರಿಕೆ ಮಾಡಿ ಖರ್ಚನ್ನು ಹೆಚ್ಚಾಗಿಸಿದೆ. ರೈತ ವಿದ್ಯಾನಿಧಿಯನ್ನು ರದ್ದು ಮಾಡಿ ರೈತರ ಮಕ್ಕಳಿಗೆ ಅನ್ಯಾಯ ಮಾಡಿದೆ. ಬಿಜೆಪಿಯ ಜಿಲ್ಲೆಗೊಂದು ಗೋ ಶಾಲೆ ಯೋಜನೆಯನ್ನು, ರೈತರಿಗೆ ಹತ್ತು ಸಾವಿರ ಧನಸಹಾಯದ ಭೂ ಸಿರಿ ಯೋಜನೆಯನ್ನು, 51 ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ಕಿಸಾನ್‌ ಸಮ್ಮಾನ್‌ ನಿಧಿಯನ್ನು ಕಾಂಗ್ರೇಸ್‌ ಸರಕಾರ ಕೈ ಬಿಟ್ಟಿರುವುದು ಅನ್ಯಾಯ ಎಂದಿದ್ದಾರೆ.
ಯಾರೂ ಬೇಕಾದರೂ ಕೃಷಿ ಭೂಮಿಯನ್ನು ಕೊಂಡುಕೊಳ್ಳಬಹುದು ಎಂಬ ನಿಯಮವನ್ನು ಕೃಷಿ ಭೂಮಿ ಮಾರಾಟ ಕಾಯ್ದೆಯ ಮೂಲಕ ತಂದಿತ್ತು. ಇದರಿಂದ ಕೃಷಿ ಜಮೀನುಗಳ ಮೌಲ್ಯ ಹೆಚ್ಚಾಗಿತ್ತು ಮತ್ತು ಇದರಿಂದ ಕೃಷಿ ಪದವೀಧರ ವಿದ್ಯಾರ್ಥಿಗಳೂ ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ತಂತ್ರಜ್ಞಾನ ಮತ್ತು ಕೃಷಿ ಕಾರ್ಯಕ್ಕೆ ಹೊಸ ಆಯಮ ನೀಡುವಂತಿತ್ತು. ಆದರೆ ಸಿದ್ಧರಾಮಯ್ಯ ಈ ಯೋಜನೆಯನ್ನು ರದ್ದುಗೊಳಿಸಲು ಮುಂದಾಗಿದೆ. ನೀರಾವರಿ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿದೆ. ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡದೆ ಕಾಂಗ್ರೇಸ್‌ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಟಂಟ್‌ ಆಗಿದೆ ಎಂದು ಪ್ರತಾಪಸಿಂಹ ಆರೋಪಿಸಿದ್ದಾರೆ.


ರೂ. 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತಹ ಸಾವಿರ ಕೋಟಿ ಅನುದಾನದಡಿ ಸ್ಥಾಪಿಸಿದ್ದ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್‌ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ. ಶ್ರಮ ಶಕ್ತಿ ಯೋಜನೆ ರದ್ಧತಿಗೆ ಮುಂದಾಗಿದೆ. ನಮ್ಮ ಸರಕಾರ ಬಜೆಟ್‌ನಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಡಿಬಿಟಿ ಮೂಲಕ ಮಾಸಿಕ ರೂ. 500 ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ರದ್ದುಗೊಳಿಸಲು ನಿರ್ಣಯಿಸಿದೆ. 180 ಕೋಟಿ ರೂ. ವೆಚ್ಚದ ಜೀವನ್‌ ಜ್ಯೋತಿ ವಿಮಾ ಯೋಜನೆಯನ್ನು, ಸಿರಿಧಾನ್ಯ ಸಂಸ್ಕರಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ನೀಡಿದ್ದ ಪ್ರಾಶಸ್ತ್ಯವನ್ನು, 100 ಕೋಟಿ ರೂ. ವೆಚ್ಚದ ರೈತ ಸಂಪದ ಯೋಜನೆಯನ್ನು, ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆಯಡಿ ರೂ. 75 ಕೋಟಿ ಅನುದಾನ ನೀಡಿ ರೈತರ ಜಮೀನುಗಳಲ್ಲಿ ಜಲ ಹೊಂಡದ ಜಲ ನಿಧಿ ಯೋಜನೆಯನ್ನು, ಮೀನುಗಾರರಿಗೆ ವಸತಿ ಸೌಲಭ್ಯದ ವ್ಯವಸ್ಥೆಯನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಾಜ್ಯದಲ್ಲಿ ಮೂರೇ ತಿಂಗಳಲ್ಲಿ 60 ಜನರ ರೈತರ ಆತ್ಮಹತ್ಯೆಯಾಗಿದೆ. ಆದರೆ ಕಾಂಗ್ರೇಸ್‌ ಸರಕಾರ ವಾರಂಟಿ ಇಲ್ಲದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡುವ ಬಗ್ಗೆಯೇ ಗೊಂದಲಕ್ಕೀಡಾಗಿದ್ದು ರಾಜ್ಯದ ಮುಗ್ಧ ಜನರನ್ನು ವಂಚಿಸುತ್ತಿದ್ದು, ಹೀಗೆ ಕರ್ನಾಟಕದ ಜನತೆಗೆ ಅನ್ನ ನೀಡಿ ಅವರ ಜೀವ ಮತ್ತು ಜೀವನವನ್ನು ನೀಡಿರುವ ರೈತಾಪಿ ವರ್ಗವನ್ನು ನಿರ್ಲಕ್ಷಿಸುತ್ತಿರುವುದು ತೀವ್ರ ಖಂಡನೀಯ. ಕರ್ನಾಟಕ ರಾಜ್ಯದ ಆರ್ಥಿಕತೆಯು ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಕೃಷಿ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ ಎಂಬುದನ್ನು ತಿಳಿಯದಿರುವುದು ಕಾಂಗ್ರೇಸ್‌ ಪಕ್ಷದ ಮನಃಸ್ಥಿತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.

Related posts

ಅರಸಿನಮಕ್ಕಿ: 20ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

Suddi Udaya

ಮರೋಡಿ ದೇವಸ್ಥಾನದಲ್ಲಿ ಶ್ರೀ ರಾಮತಾರಕ ಮಂತ್ರ ಹೋಮ

Suddi Udaya

ಕೊಯ್ಯೂರು : ಆದೂರು ಪೆರಲ್ ನಲ್ಲಿ ಕುಣಿತ ಭಜನೆ ತರಬೇತಿ ಉದ್ಘಾಟನೆ

Suddi Udaya

ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಭಾಟನೆ

Suddi Udaya

ಬಳಂಜ ಗ್ರಾಮ ಪಂಚಾಯತ್ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಕೊಯ್ಯೂರು ಪ.ಪೂ. ಕಾಲೇಜಿಗೆ ಶೇ. 83.87 ಫಲಿತಾಂಶ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ