ಬೆಳ್ತಂಗಡಿ: ಆಧುನಿಕ ಬ್ಯಾಂಕ್ ಸೇವೆಯಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಮಸ್ತ ರೈತಾಪಿ ವರ್ಗದ ಹಾಗೂ ಗ್ರಾಹಕರ ಸೇವೆಯಲ್ಲಿ ಜನಮನ್ನಣೆ ಗಳಿಸಿದೆ. ಬೆಳ್ತಂಗಡಿ ಶಾಖೆಯು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು ಈ ಪರಿಸರದಲ್ಲಿ ಹೊಸ ಎಟಿಎಂ ನ ಅವಶ್ಯಕತೆಯಿದ್ದು ಆಗಸ್ಟ್ 27 ರಂದು ಬೆಳಿಗ್ಗೆ 11 ಗಂಟೆಗೆ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಮತ್ತು ಕಟ್ಟಡದ ಲಿಪ್ಟ್ ನ ಉದ್ಘಾಟನೆ ನಡೆಯಲಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ನಿರಂಜನ್ ಬಾವಂತಬೆಟ್ಟು ತಿಳಿಸಿದರು.
ಅವರು ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ವಹಿಸಲಿದ್ದಾರೆ. ಹೊಸ ಎಟಿಎಂ ನ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ಹಾಗೂ ವಿಧಾನಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಲಿಪ್ಟ್ ಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಮಾತನಾಡಿ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಹಕಾರಿ ಸಂಘವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಸಂಘವು 80 ವರ್ಷದ ಇತಿಹಾಸದಲ್ಲಿ 96 ಕೋಟಿ ವ್ಯವಹಾರ ಹಾಗೂ 26 ಶಾಖೆಗಳನ್ನು ಹೊಂದಿತ್ತು. ಆದರೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಸಂಘವು ಕಳೆದ 29 ವರ್ಷದಲ್ಲಿ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರ ಮುಂದಾಳತ್ವದಲ್ಲಿ 13396 ಕೋಟಿ ವ್ಯವಹಾರ ಮತ್ತು 85 ಶಾಖೆಗಳನ್ನು ಮಾಡಿದೆ.ಎಲ್ಲಾ ಕೃಷಿ ಸಾಲಗಳು 100 ಶೇ.ವಸೂಲಾತಿ ಕಂಡಿದ್ದು ಇದು ರಾಷ್ಟ್ರೀಯ ದಾಖಲೆಯಾಗಿದೆ.19 ಬಾರಿ ಅಪೆಕ್ಸ್ ಪ್ರಶಸ್ತಿ ದೊರೆತಿರುವುದು ಬ್ಯಾಂಕಿನ ಕಾರ್ಯ ಸಾಧನೆಗೆ ಸಂದ ಪುರಸ್ಕಾರವಾಗಿದೆ.ಸ್ವಸಹಾಯ ಗುಂಪುಗಳ ನಿರ್ವಹಣೆಗೆ 17 ಬಾರಿ ನಬಾರ್ಡ್ ಪ್ರಶಸ್ತಿ ಬ್ಯಾಂಕಿಗೆ ದೊರೆತಿದೆ. ಎಫ್.ಸಿ.ಬಿ.ಎ ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್ ಪುರಸ್ಕೃತಗೊಂಡಿದೆ. ಸುಮಾರು 190 ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಹೆಚ್ಚಿನ ಸಂಘಗಳು ದೊಡ್ಡ ದೊಡ್ಡ ಕಟ್ಟಡವನ್ನು ಹೊಂದಿ ಪ್ರಗತಿ ಸಾಧಿಸಿದೆ ಎಂದರು.
ಬೆಳ್ತಂಗಡಿ ಶಾಖಾ ವ್ಯವಸ್ಥಾಪಕ ಸುಧೀರ್ ಕುಮಾರ್ ಎಸ್.ಪಿ ಸ್ವಾಗತಿಸಿದರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ವಂದಿಸಿದರು.