ಧಮ೯ಸ್ಥಳ: ಪಾಂಗಾಳ ನಿವಾಸಿ ಕು| ಸೌಜನ್ಯಳಿಗೆ ನ್ಯಾಯ ಸಿಗಬೇಕು ಪ್ರಕರಣದ ಮರು ತನಿಖೆಯಾಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಆಕೆಯ ಹತ್ಯೆಯ ಕುರಿತು ನಮಗೂ ದುಃಖವಿದೆ. ಆದರೆ, ಈಗಿನ ಬೆಳವಣಿಗೆಯನ್ನು ಗಮನಿಸಿದಾಗ ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವುದಾಗಿ ಹೇಳುತ್ತಿರುವ ಹೋರಾಟಗಾರರ ನಿಜವಾದ ಉದ್ದೇಶ ದುರುದ್ದೇಶವೇ ಆಗಿದೆ ಎಂಬುದು ಅತ್ಯಂತ ಸ್ಪಷ್ಟವಾಗುತ್ತಿದೆ. ಈ ಪ್ರಕರಣವನ್ನು ಒಂದು ನೆಪವಾಗಿರಿಸಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಖಾವಂದರಿಗೆ ಕಳಂಕ ಹಚ್ಚುವುದನ್ನು ನಾವು ಸರ್ವತಾ ಒಪ್ಪುವುದಿಲ್ಲ ಹಾಗೂ ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಹಿರಿಯರಾದ ದಿವಾಕರ ರಾವ್ ಹೇಳಿದರು.
ಅವರು ಆ.24ರಂದು ಧಮ೯ಸ್ಥಳ ಮಹೋತ್ಸವ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಒಬ್ಬ ದೇವಸ್ಥಾನವನ್ನು ಜೆ.ಸಿ.ಬಿ ಮೂಲಕ ನಾಶಗೊಳಿಸಬೇಕೆಂಬ ಪ್ರಚೋದನಾಕಾರಿ ಹೇಳಿಕೆ ನೀಡುವುದು ಮತ್ತು ಶ್ರೀ ಮಂಜುನಾಥ ಸ್ವಾಮಿ, ಶ್ರೀ ಅಣ್ಣಪ್ಪ ಸ್ವಾಮಿಗೆ ಕೈಮುಗಿಯುವುದು ವೇಸ್ಟ್ ಎಂಬಿತ್ಯಾದಿ ಅನೇಕ ಅವಹೇಳನಕಾರಿ ಮಾತುಗಳನ್ನಾಡುವುದು ಶ್ರೀ ಕ್ಷೇತ್ರ ಧರ್ಮಸ್ಥಳದ ತೆಜೋವಧೆ ಮಾಡುವುದು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವುದಷ್ಟೇ ಮುಖ್ಯ ಉದ್ದೇಶವಾಗಿದೆ ಎಂದು ಆರೋಪಿಸಿದರು. ಇಂತಹ ಸೂಕ್ಷ್ಮ ಹಾಗೂ ಗಂಭೀರ ಪರಿಸ್ಥಿತಿಯಲ್ಲಿ ಪ್ರಾರ್ಥನೆ ಮೊದಲಾದ ನೆಪದಲ್ಲಿ ಪ್ರಚೋದನೆ ನೀಡುತ್ತಿರುವ ವ್ಯಕ್ತಿಗಳು ಹಾಗೂ ಅವರಿಂದ ಪ್ರಭಾವಿತರಾದವರು ಸಹ ಬೇರೆ ಬೇರೆ ಸಂಘಟನೆಗಳ ಹೆಸರಿನ ಅಡಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಗುಂಪುಕಟ್ಟಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರವೇಶಿಸಿ ಅವರ ದುರುದ್ದೇಶಿತ ಸಂಚುಗಳನ್ನು ಕಾರ್ಯಗತಗೊಳಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಶಾಂತಿ ಮೂಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅವರ ಯಾವುದೇ ಪ್ರಯತ್ನವನ್ನು. ಜೀವದಾಸೆ ಬಿಟ್ಟು ಹತ್ತಿಕ್ಕಲು ಗ್ರಾಮದ ಸಮಸ್ತರು ಒಂದಾಗಿ ದೃಢ ನಿರ್ಧಾರ ಮಾಡಿರುತ್ತೇವೆ ಎಂದು ತಿಳಿಸಿದರು.
ದೇಶದ ಸಂವಿಧಾನ, ನ್ಯಾಯಾಲಯ, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಸಿ.ಬಿ.ಐ., ಸಿ.ಐ.ಡಿ. ಮತ್ತು ಪೊಲೀಸ್ ಇಲಾಖೆಗಳನ್ನು ತುಚ್ಛ ಮಾತುಗಳಿಂದ ಅವಮಾನಿಸುತ್ತಿರುವನೊಬ್ಬ ಅಥವಾ ಆತನ ಹಿಂಬಾಲಕರು ಅಥವಾ ಆತನಿಂದ ಪ್ರೇರೇಪಿತರಾದ ಕೆಟ್ಟ ಶಕ್ತಿಗಳು ಅಥವಾ ವ್ಯಕ್ತಿಗಳು ಯಾವುದೇ ಸಂಘಟನೆಯ ಹೆಸರಿನಿಂದ ಬಂದರೂ ಶ್ರೀ ಕ್ಷೇತ್ರ ಧರ್ಮಸ್ಥಳದ ರಕ್ಷಣೆಗಾಗಿ ನಿರ್ದಾಕ್ಷಿಣ್ಯವಾಗಿ ಎಷ್ಟೇ ಬೆಲೆ ತೆತ್ತಾದರೂ ಸಮಸ್ತ ಧರ್ಮಸ್ಥಳದ ಗ್ರಾಮಸ್ಥರಾದ ನಾವು ಅಂತಹ ಪ್ರಯತ್ನಗಳನ್ನು ತಡೆಯುವುದಾಗಿ ನಿರ್ಧರಿಸಿರುತ್ತೇವೆ ಹಾಗೂ ಸಂಬಂಧಿತ ಇಲಾಖೆಗಳಿಗೆ ಈ ಕುರಿತು ಮನವಿಯನ್ನು ನೀಡಿರುತ್ತೇವೆ ಎಂದು ದಿವಾಕರ ರಾವ್ ಈ ಸಂದರ್ಭ ತಿಳಿಸಿದರು.
ಧರ್ಮಸ್ಥಳದ ಶ್ರೀನಿವಾಸ ರಾವ್ ಅವರು ಮಾತನಾಡಿ, ದೇಶದ ಸಂವಿಧಾನದಲ್ಲಿ ತನಗೆ ನಂಬಿಕೆ ಇಲ್ಲ, ಕಾನೂನಿನಲ್ಲಿ ನಂಬಿಕೆ ಇಲ್ಲ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ ಎನ್ನುವ ವ್ಯಕ್ತಿಯೊಬ್ಬ ದೇಶದ ಸಾರ್ವಭೌಮತ್ವಕ್ಕೆ ಸವಾಲು ಹಾಕುತ್ತಿದ್ದಾನೆ, ಸಮಾಜದ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪಿತೂರಿ ನಡೆಸುತ್ತಿರುವುದು ಅಪಾಯಕಾರಿ ಎಂದರು
ಶ್ರೀಮತಿ ಛಾಯ ಹಾಗೂ ಶ್ರೀಮತಿ ಶಾಂಭವಿ ಆರ್. ಶೆಟ್ಟಿ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಧರ್ಮಾಧಿಕಾರಿಯವರ ವಿರುದ್ಧ ಅವಹೇಳನ ಮಾಡುತ್ತಿರುವ ಹಾಗೂ ಧರ್ಮಸ್ಥಳದ ಮಂಜುನಾಥ ಮತ್ತು ಅಣ್ಣಪ್ಪ ಸ್ವಾಮಿಗೆ ಕೈ ಮುಗಿಯುವುದು ವೆಸ್ಟ್, ಜೆಸಿಬಿಯನ್ನು ತಂದು ಮಗುಚಿ ದೇವಸ್ಥಾನವನ್ನು ಎಂದು ಹೇಳಿ ದೈವ ದೇವರನ್ನು ನಿಂದಿಸುತ್ತಿರುವ ವ್ಯಕ್ತಿಗಳು ಧರ್ಮಸ್ಥಳಕ್ಕೆ ಬರಬಾರದು, ಅವರು ಬಂದರೆ ಎಲ್ಲಾ ಮಹಿಳೆಯವರು ಒಟ್ಟಾಗಿ ಸೇರಿ ಇದನ್ನು ತಡೆಯುವ ಕಾರ್ಯವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭಾಸ್ಕರ ಧರ್ಮಸ್ಥಳ, ಪ್ರಭಾಕರ ಪೂಜಾರಿ, ವಿಠಲ ಶೆಟ್ಟಿ, ಸಂದೀಪ್ ರೈ ಮೊದಲಾದವರು ಉಪಸ್ಥಿತರಿದ್ದರು.
ಪೊಲೀಸ್ ಠಾಣೆಗೆ ಮನವಿ: ನಂತರ ಧರ್ಮಸ್ಥಳ ಧರ್ಮಸ್ಥಳದ ನಾಗರಿಕರು, ಗ್ರಾಮಸ್ಥರು, ಧರ್ಮಸ್ಥಳ ಪೊಲೀಸ್ ಠಾಣೆ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯತಕ್ಕೆ ತೆರಳಿ ಮನವಿ ಸಲ್ಲಿಸಿದರು. ನ್ಯಾಯವಾದಿ ಕೇಶವ ಬೆಳಾಲು ಅವರು ಮಾತನಾಡಿ, ಶ್ರೀ ಕ್ಷೇತ್ರಕ್ಕೆ ದೇವರ ದರ್ಶನ ಮತ್ತು ಪ್ರಾರ್ಥನೆಗೆ ಬರುವುದಕ್ಕೆ ನಮ್ಮದು ಯಾವುದೇ ಆಕ್ಷೇಪ ಇಲ್ಲ ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ನಿಂದನೆ ಮಾತುಗಳನ್ನಾಡಿ, ಧರ್ಮಸ್ಥಳದಲ್ಲಿ ದೇವರು, ದೈವಗಳಿಗೆ ಕೈಮುಗಿಯುವುದು ವೆಸ್ಟ್ ಎಂದು ಕ್ಷೇತ್ರ ಪಾವಿತ್ರಕ್ಕೆ ಧಕ್ಕೆ ಮತ್ತು ಹಾನಿಯನ್ನುಂಟು ಮಾಡುವ ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿಗಳು ಗುಂಪುಕಟ್ಟಿಕೊಂಡು ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಪ್ರವೇಶಿಸಿ, ಕ್ಷೇತ್ರದಲ್ಲಿ ಅಶಾಂತಿ ಮೂಡಿಸಿ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಪ್ರಯತ್ನವನ್ನು ಮಾಡಲು ಪೊಲೀಸ್ ಇಲಾಖೆ ಬಿಡಬಾರದು. ಒಂದು ವೇಳೆ ಮಾಡಿದರೆ ಅವರನ್ನು ಹತ್ತಿಕ್ಕಲು ಗ್ರಾಮದ ಸಮಸ್ತರು ಒಂದಾಗಿ ದೃಢ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.