ಮುಂಡಾಜೆ: ಮುಂಡಾಜೆ ಗ್ರಾ.ಪಂ. ನೇತೃತ್ವದಲ್ಲಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾ.ಪಂ. ಬೆಳ್ತಂಗಡಿ ಹಾಗೂ ಮುಂಡಾಜೆ ಪ್ಯಾಕ್ಸ್ ಸಹಭಾಗಿತ್ವದಲ್ಲಿ ಜೀವ ಜಲ ಜಾಗೃತಿ ಮಾಹಿತಿ ಕಾರ್ಯಕ್ರಮವು ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ನಡೆಯಿತು.
ಮುಂಡಾಜೆ ಪ್ಯಾಕ್ಸ್ ಅಧ್ಯಕ್ಷ ಜನಾರ್ದನ ಗೌಡ ನೂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ “ಮಳೆ ಅಭಾವ ಚಿಂತೆಯ ವಿಚಾರವಾಗಿದೆ. ಈಗಲೇ ಹಲವೆಡೆ ನೀರು ಬತ್ತುತ್ತಿದೆ. ನೀರನ್ನು ಮಿತವಾಗಿ ಬಳಸುವುದು ಅಗತ್ಯ. ನಮ್ಮ ಪರಿಸರದ ಏರುಪೇರು, ಅರಣ್ಯ ನಾಶ, ಗಣಿಗಾರಿಕೆ ಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ.
ವಾಣಿಜ್ಯ ಬೆಳೆಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಗದ್ದೆ ಬೇಸಾಯ ಕಡಿಮೆ ಆಗುತ್ತಿದ್ದು ಇದು ಕೂಡ ನೀರಿನ ಕೊರತೆಗೆ ಕಾರಣವಾಗುತ್ತಿದೆ” ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಗಣೇಶ್ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ “ನೀರಿನ ಕುರಿತ ಜಾಗೃತಿ ಈಗಿನಿಂದಲೇ ಮೂಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ನೀರಿನ ಅಭಾವ ಕಂಡು ಬರದು. ನೀರು ಉಳಿಸುವ ಕುರಿತು ಹೆಚ್ಚಿನ ಕಾರ್ಯಕ್ರಮಗಳು ನಡೆಯಬೇಕು, ಗ್ರಾಮಸ್ಥರಿಗೆ ಇದರ ಅರಿವು ಮೂಡುವುದು ಮುಖ್ಯ”ಎಂದರು.
ಉಪಾಧ್ಯಕ್ಷೆ ಸುಮಲತಾ, ಮುಂಡಾಜೆ ಪ್ಯಾಕ್ಸ್ ಸಿಇಒ ಚಂದ್ರಕಾಂತ ಪ್ರಭು ಉಪಸ್ಥಿತರಿದ್ದರು. ಹಿರಿಯ ಕೃಷಿಕ, ನಿವೃತ್ತ ಶಿಕ್ಷಕ ಗಜಾನನ ವಝೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ನೀರು ಉಳಿಸುವ, ಮಳೆ ನೀರು ಕೊಯ್ಲು ಹಾಗೂ ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು. ಪಿಡಿಒ ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.