ಮಂಗಳೂರು : ಸಹಕಾರಿ ರಂಗದಲ್ಲಿ ದಿನೇ ದಿನೇ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು, 2022-23ನೇ ಹಣಕಾಸು ಸಾಲಿನಲ್ಲಿ 125 ಕೋ.ರೂ. ಮೀರಿ ವ್ಯವಹಾರ ನಡೆಸಿ, 38.44ಲಕ್ಷ ರೂ. ಲಾಭ ಗಳಿಸುವ ಮೂಲಕ ಮಹತ್ವದ ಸಾಧನೆಗೈದಿದೆ. ಲಾಭಾಂಶದಲ್ಲಿ 15 ಸಾ.ರೂ. ಗಳನ್ನು ದೇಶದ ಗಡಿಗಳನ್ನು ಅಹರ್ನಿಶಿ ಕಾಯುವ, ನಮ್ಮ ನೆಮ್ಮದಿಯ ಜೀವನಕ್ಕೆ ಕಾರಣಕರ್ತ, ದೇಶದ ದಿಟ್ಟ ಯೋಧರ ನಿಧಿಗೆ ಸಮರ್ಪಿಸಲಾಗುವುದು. ಆಪತ್ಕಾಲೀನ ಸನ್ನಿವೇಶಗಳಿಗೆ ಸ್ಪಂದಿಸಲು ರೂ. 10ಸಾವಿರ ಮೀಸಲಿಡಲಾಗಿದೆ. ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಗಣೇಶ್ ಶೆಣೈ ಹೇಳಿದರು.
ಮಂಗಳೂರು ವಿ.ವಿ. ಕಾಲೇಜಿನ (ಹಿಂದಿನ ಸರಕಾರಿ ಕಾಲೇಜು) ರವೀಂದ್ರ ಕಲಾಭವನದಲ್ಲಿ ಸೆ.3 ರಂದು ನಡೆದ, ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸ.ಸಂಘದ 21ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾಹಿತಿ ನೀಡಿದರು.
ಹಿಂದೆ 5.25 ಲ.ರೂ. ಮೌಲ್ಯದ ಶೇರುಗಳೊಂದಿಗೆ ಆರಂಭಗೊಂಡ ಶ್ರೀ ಪೂರ್ಣಾನಂದ ವಿ. ಸೌಹಾರ್ದ ಸಹಕಾರಿ ಸಂಘ ಇಂದು 125 ಕೋ. ರೂ. ಮೀರಿ ವ್ಯವಹಾರ ದಾಖಲಿಸಲು ಸಂಸ್ಥೆಯ ಬೆನ್ನೆಲುಬಾಗಿರುವ ಸದಸ್ಯರ, ಸಹೃದಯಿ ಗ್ರಾಹಕರ ಸಹಕಾರ ಕಾರಣವೆಂದು ಗಣೇಶ್ ಶೆಣೈ ಸಂತಸ ವ್ಯಕ್ತಪಡಿಸಿದರು.
ಸಂಸ್ಥೆ 2022-23ನೇ ಹಣಕಾಸು ವರ್ಷದಲ್ಲಿ 52 ಲ.ರೂ. ಪಾಲು ಬಂಡವಾಳ ಹೊಂದಿದ್ದು, 4 ಲಕ್ಷ ಮೀರಿ ಶೇರು ವ್ಯವಹಾರ ನಿರ್ವಹಿಸಿದೆ. 28 ಕೋ. ರೂ. ಠೇವಣಿ ಕಾಯ್ದುಕೊಂಡ ಹೆಗ್ಗಳಿಕೆ ಹೊಂದಿದೆ. 2021-2022 ಸಾಲಿನಲ್ಲಿ ಬರೇ 9 ಲ.ರೂ. ಲಾಭ ಪ್ರಮಾಣ, ಪ್ರಸಕ್ತ ಬಹುಪಟ್ಟಾಗಿ 38 ಲಕ್ಷ ಮೀರಿರುವುದು ಸಹಕಾರಿ ರಂಗಕ್ಕೆ ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಪೂರ್ಣಾನಂದ ಸಂಸ್ಥೆಯ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡೋ ಆಶಯ ಆಡಳಿತ ಮಂಡಳಿಗಿದೆ. 2022-23ರಲ್ಲಿ ಜಿಲ್ಲೆಯ ವಿವಿಧೆಡೆ ಹಲವು ಸಾವಯವ ಕೃಷಿ ಮಾಹಿತಿ ಶಿಬಿರ ನಡೆಸಲಾಗಿದೆ. ಮುಂದೆ ವೈದ್ಯಕೀಯ ಶಿಬಿರ ಆಯೋಜಿಸಲಾಗುವುದು. ಪೂರ್ಣಾನಂದ’ ಪ್ರೊಡಕ್ಟ್ ವ್ಯವಹಾರ ದಲ್ಲಿನ ನಷ್ಟ ಸರಿದೂಗಿಸಿ ಲಾಭದ ಹಾದಿಯಲ್ಲಿ ಮುನ್ನಡೆಸಲಾಗುವುದು ಎಂದು ಶೆಣೈ ಭರವಸೆ ನೀಡಿದರು.
ಶ್ರೀ ಪೂರ್ಣಾನಂದ ಸಂಸ್ಥೆಯ ಹಿರಿಯ ಸದಸ್ಯ., ಶಿಕ್ಷಣ ಇಲಾಖೆಯ (ಹಿ.ಪ್ರಾ.ಶಾಲಾ) ನಿವೃತ್ತ ಪರಿವೀಕ್ಷಣಾಧಿಕಾರಿ ನಾರಾಯಣ ಮಾಸ್ಟರ್ ಹಾಗೂ ಪೂರ್ಣಾನಂದದ ಹಿರಿಯ ಸದಸ್ಯರು ಎಸ್ಸೆಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ, ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿದರು. ಲೆಕ್ಕ ಪರಿಶೋಧಕ ನರೇಂದ್ರ ಪೈ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸ, ಸಂ.ನಿಯಮಿತದ ಉಪಾಧ್ಯಕ್ಷ ಉಪೇಂದ್ರ ನಾಯಕ್, ನಿರ್ದೇಶಕರಾದ ಕೆ. ಮೋಹನ್ ನಾಯಕ್, ದಯಾನಂದ ನಾಯಕ್ ,ಜಗದೀಶ್ ಶೆಣೈ, ವಿಶ್ವನಾಥ ಕೆ., ರವೀಂದ್ರ ಪ್ರಭು, ಹರಿಶ್ಚಂದ್ರ ಪ್ರಭು,, ಸದಾನಂದ ಪ್ರಭು, ಅರವಿಂದ ಕುಮಾರ್ ಶೆಟ್ಟಿ, ಶ್ರೀವಲ್ಲಭಿ ಉಪಸ್ಥಿತರಿದ್ದರು.
ಶ್ರೀ ಪೂರ್ಣಾನಂದ ಸಂಸ್ಥೆ ಅಧ್ಯಕ್ಷ ಗಣೇಶ್ ಶೆಣೈ ಸ್ವಾಗತಿಸಿ, ಸಂಸ್ಥೆಯ ಸಿಬ್ಬಂದಿ ಉಪೇಂದ್ರ ಪ್ರಾರ್ಥನೆ ಹಾಡಿದರು. ನಿರ್ದೇಶಕ ದಯಾನಂದ ನಾಯಕ ಗತಿಸಿದ ಸಹಕಾರಿ ಸದಸ್ಯರಿಗೆ ನುಡಿನಮನ ಸಲ್ಲಿಸಿದರು. ಹಿರಿಯ ಸಹಕಾರಿ ಬಾಲಕೃಷ್ಣ ಕೊಡಂಗೆ ಭಾರತಮಾತೆಯ ವಿಭವದಿ ಮೆರೆಯಲು ಸಹಕಾರ ತತ್ವವೇ ಸಾಧನ ಸಹಕಾರ ಗೀತೆ ಹಾಡಿದರು. ಪ್ರ ವ್ಯವಸ್ಥಾಪಕ ವಾಸುದೇವ ಯು. ತಿಳಿವಳಿಕೆ ಪತ್ರ ಓದಿದರು. ನಿರ್ದೇಶಕ ಹರಿಶ್ಚಂದ ಪ್ರಭು ವಂದಿಸಿದರು. ಸಿಬ್ಬಂದಿ ಧನ್ಯತಾ ನಿರೂಪಿಸಿದರು.