ಮಾಲಾಡಿ: ತರಬೇತಿಯ ಮಕ್ಕಳನ್ನು ಎಕ್ಸಾಮ್ ಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ವ್ಯಕ್ತಿ ವಾಪಾಸ್ ಮನೆಗೆ ಬಾರದೆ ನಾಪತ್ತೆಯಾದ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪದಬೈಲು ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆಯಾದ ಯುವಕ.
ಅನಿಲ್ ಪ್ರವೀಣ ಪಿರೇರಾ ಅವರು ವಿನ್ ನ್ಯಾಷನಲ್ ಸ್ಟೇಲ್ ಬಿ ತರಬೇತಿಯ regional coordinator ಆಗಿ ಕೆಲಸ ನಿರ್ವಹಿಸುತ್ತಿದ್ದು, ಸೆ.02 ರಂದು ಸಂಜೆ 8.30 ಕ್ಕೆ ವಿನ್ ನ್ಯಾಷನಲ್ ಸ್ಟೇಲ್ ಬಿ ತರಬೇತಿಯ 5 ಜನ ಮಕ್ಕಳನ್ನು ಬೆಂಗಳೂರಿನಲ್ಲಿ ನಡೆಯುವ ಎಕ್ಸಾಮ್ ಗೆ ಕರೆದುಕೊಂಡು ಹೋಗಿ ಬರುವುದಾಗಿ ಹೇಳಿ ತೆರಳಿದ್ದಾರೆ. ಬಳಿಕ ಸೆ.3 ರಂದು ರಾತ್ರಿ 8.45 ಕ್ಕೆ ಕರೆ ಮಾಡಿ ವಿಚಾರಿಸಿದಾಗ ರಾತ್ರಿ 9 ಗಂಟೆಗೆ ಬೆಂಗಳೂರಿನಿಂದ ಮಂಗಳೂರಿಗೆ ಬಸ್ ಇದ್ದು, ಇನ್ನು ಹೊರಡಬೇಕಷ್ಟೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಆದ್ರೆ ಸೆ.4ರಂದು ಬೆಳಿಗ್ಗೆ 5ಗಂಟೆಗೆ ಎಕ್ಸಾಮ್ ಗೆ ಹೋಗಿದ್ದ ಮಕ್ಕಳನ್ನು ಕರೆದುಕೊಂಡು ಬರಲು ಬಿಸಿರೋಡ್ ಗೆ ಹೋದ ಅನಿಲ್ ಡೇಸಾ ಎಂಬವವರನ್ನು ಸಂಪರ್ಕಿದಾಗ ಅನಿಲ್ ಅವರು ಬೆಳಿಗ್ಗೆ 5ಗಂಟೆಗೆ ಬಿಸಿರೋಡ್ ಗೆ ತಲುಪಿ ತರಬೇತಿಗೆ ತೆರಳಿದ ಮಕ್ಕಳನ್ನು ಬಿಸಿರೋಡ್ ನಲ್ಲಿ ಇಳಿಸಿ ಬಳಿಕ ಮಂಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಬರುವುದಾಗಿ ಹೇಳಿ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಅನಿಲ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬಳಿಕ ಸಂಜೆಯಾದರೂ ಮನೆಗೆ ಮರಳಿ ಬಾರದೆ ಇರುವುದನ್ನು ಕಂಡು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಾಗ ಅನಿಲ್ ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಧ್ಯ ಪತ್ನಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಲ್ ಪ್ರವೀಣ ಪಿರೇರಾ ಅವರ ಪತ್ತೆಗೆ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ