ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಕಾಲೇಜು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿ.ಎಡ್. ಕಾಲೇಜು ಸಹಯೋಗದಲ್ಲಿ ಕರಕುಶಲ ಕಲೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಕಾಲೇಜಿನಲ್ಲಿ ಸೆ.2ರಂದು ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಕಾರ್ಯಾಗಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, “ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಿ ಅವರಲ್ಲಿರುವ ಕೌಶಲಗಳನ್ನು ಗುರುತಿಸಿ, ನಿರಂತರ ಪ್ರೋತ್ಸಾಹ, ಸಹಕಾರ ನೀಡಿದಾಗ ಹೊಸತನ ಸಾಧ್ಯವಾಗುತ್ತದೆ. ಕರಕುಶಲ ಕಲೆಯಿಂದ ಹೊಸ ಹೊಸ ಉತ್ಪನ್ನಗಳು ಉತ್ಪತ್ತಿಯಾಗುತ್ತವೆ. ಅದಕ್ಕಾಗಿ ಕಾರ್ಯಾಗಾರ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮ ಸದುಪಯೋಗವಾಗಲಿ ಮತ್ತು ನಿಮ್ಮ ಜೀವನ ನಿರ್ವಹಣೆ ಮಾಡಲು ಸಹಕಾರಿ ಆಗಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸ್ವಾಮಿ ಕೆ.ಎ. ಅವರು ಮಾತನಾಡಿ, “ಪ್ರಶಿಕ್ಷಣಾರ್ಥಿಗಳು ಇಲ್ಲಿ ಕಲಿತ ಕಲೆಯನ್ನು ನಂತರ ತಮ್ಮ ತಮ್ಮ ಮನೆಗಳಲ್ಲಿ ಹಾಗೂ ತಾವು ಮುಂದೆ ದುಡಿಯಲು ಹೋದ ಶಾಲೆಯ ಮಕ್ಕಳಿಗೆ ಕಲಿಸಿ” ಎಂದು ಸೂಚನೆ ನೀಡಿದರು.
“ನಮ್ಮ ಈ ಎರಡೂ ಸಂಸ್ಥೆಗಳು ಈ ಹಿಂದೆಯೂ ಅನೇಕ ಬಾರಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದು, ಮುಂದೆಯೂ ಇದೇ ರೀತಿ ಮುಂದುವರಿಯಲಿ” ಎಂದು ಅವರು ಆಶಿಸಿದರು.
ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ದಿವ್ಯ ಅವರು ಕರಕುಶಲ ವಸ್ತುಗಳ ತಯಾರಿಕೆ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ವಿವಿಧ ಬಗೆಯ ವಸ್ತುಗಳನ್ನು ತಯಾರಿಸಿದರು.
ಎಸ್.ಡಿ.ಎಂ. ಡಿ.ಎಡ್. ಕಾಲೇಜಿನ ಶಿಕ್ಷಕಿ ಅನುಷಾ ಎ. ಜೆ. ಸ್ವಾಗತಿಸಿ, ವಂದಿಸಿದರು. ಯತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.