ಬೆಳ್ತಂಗಡಿ; ಶೈಕ್ಷಣಿಕ ಕ್ಷೇತ್ರ ಸಾಮಾನ್ಯ ಕ್ಷೇತ್ರವಲ್ಲ. ಆದ್ದರಿಂದ ಪಠ್ಯಪುಸ್ತಕ ರಚನೆಯಂತಹಾ ಜವಾಬ್ಧಾರಿಯುತ ವಿಚಾರಗಳಲ್ಲಿ ನುರಿತ ಶಿಕ್ಷಣ ತಜ್ಞರು ಸಮಿತಿಯಲ್ಲಿರಬೇಕೇ ಹೊರತು ರಾಜಕೀಯ ಹಸ್ತಕ್ಷೇಪದ ವ್ಯಕ್ತಿಗಳಲ್ಲ. ಈ ಸಮಾಜಕ್ಕೆ ಸಂಸ್ಕಾರಯುತ ಉತ್ತಮ ಶಿಕ್ಷಣದ ಆವಶ್ಯಕತೆ ಇದೆ ಎಂದು ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ ಹೇಳಿದರು.
ರೋಟರಿ ಕ್ಲಬ್ ಬೆಳ್ತಂಗಡಿ, ಎಕ್ಸೆಲ್ ಪ.ಪೂ. ಕಾಲೇಜು ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘ, ಸಹಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಸೆ.9 ರಂದು ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಹಿರಿಯರು ಜಾಣ್ಮೆ, ತಾಳ್ಮೆ, ಸಮಾಜದ ಅರಿವು ಹೊಂದಿರುವ ಸ್ವಾಸ್ಥ್ಯ ಪೂರ್ಣ ಶಿಕ್ಷಣ ಹೊಂದಿದ್ದರು. ಕಾಲು ಭಾಗ ವಿಧ್ಯೆ ಮುಕ್ಕಾಲು ಭಾಗ ಅರಿವು ಹೊಂದಿದ್ದರಿಂದ ಶ್ರೇಷ್ಠ ಸಮಾಜ ನಿರ್ಮಾಣವಾಗಿತ್ತು. ಈ ಸಮ್ಮೇಳನದಲ್ಲಿ ಮೂಡಿ ಬಂದಿರುವ ಅಂಶವನ್ನು ವಿಧಾನ ಸಭೆಯ ಒಳಗೆ ನಿಮ್ಮ ಧ್ವನಿಯಾಗಲು ನಾನು ಬದ್ಧ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಮಚ್ಚಿಮಲೆ ಅನಂತ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿರಂತರ ಪಠ್ಯದ ಬದಲಾವಣೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂತಹಾ ಸ್ಥಿತಿಯನ್ನು ನಿಯಂತ್ರಿಸಬೇಕಾಗಿದೆ. ಅಂತಹಾ ವಿಚಾರಕ್ಕಾಗಿ ಸಣ್ಣಮಟ್ಟದಲ್ಲಿ ಧ್ವನಿ ಮೂಡಿಸುವುದೇ ಈ ಸಮ್ಮೇಳನದ ಉದ್ದೇಶವಾಗಿತ್ತು ಎಂದರು.
ರೋಟರಿ ಜಿಲ್ಲಾ ನಿಯೋಜಿತ ರಾಜ್ಯಪಾಲ ನಿವೃತ್ತ ಸೇನಾನಿ ವಿಕ್ರಂ ದತ್ತ ಶುಭಕೋರಿದರು.ವೇದಿಕೆಯಲ್ಲಿ ದ.ಕ.ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷ ಮಹಮ್ಮದ್ ರಿಯಾಝ್, ಕಾರ್ಯಕ್ರಮದ ಪ್ರಧಾನ ಸಂಯೋಜಕ ಗುರುವಾಯನಕೆರೆ ಎಕ್ಸೆಲ್ ಪ.ಪೂ.ಕಾಲೇಜು ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಉಪಸ್ಥಿತರಿದ್ದರು.ಈ ಬಾರಿಯ ಪ್ರೌಢ ಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಮಕೃಷ್ಣ ಭಟ್ ಚೊಕ್ಕಾಡಿ ಅವರನ್ನು ಈ ಸಭೆಯಲ್ಲಿ ಭೋಜೇ ಗೌಡರ ವತಿಯಿಂದ ಸನ್ಮಾನಿಸಲಾಯಿತು.
ಬೆಳಾಲು ಶ್ರೀ ಧ.ಮಂ.ಪ್ರೌ.ಶಾಲೆ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ನಿರೂಪಿಸಿದರು.ತಾಲೂಕು ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್ ತುಳುಪುಳೆ ಸ್ವಾಗತಿಸಿದರು. ತಾಲೂಕು ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೊಯ್ಯೂರು ಧನ್ಯವಾದವಿತ್ತರು.