ಗುರುವಾಯನಕೆರೆ: ಶಿಕ್ಷಣ ಎಂಬುದು ಗುರು ಶಿಷ್ಯರ ಪರಸ್ಪರ ಗೌರವದ ಭಾವನಾತ್ಮಕ ವಿಚಾರವಾಗಿದೆ. ಗುರಿ ಸಾಧನೆಯೆಡೆಗೆ ಸ್ಪಷ್ಟ ಸಂಕಲ್ಪ ಮತ್ತು ಗುರುವಿನಲ್ಲಿ ಭಕ್ತಿ ಇದ್ದಲ್ಲಿ ಕಾರ್ಯಸಿದ್ಧಿ ಸಾಧ್ಯ ಎಂದು ನರಸಿಂಹರಾಜಪುರದ ಬಸ್ತಿಮಠ ಶ್ರೀಕ್ಷೇತ್ರ ಸಿಂಹನಗದ್ದೆಯ ಶ್ರೀಮದ್ಅಭಿನವ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ನುಡಿದರು.
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ಸೆ.10 ರಂದು ನಡೆದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಗುರು ನಮನ ಕಾರ್ಯಕ್ರಮ ಹಾಗೂ 272 ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ದೇಶ ಸೇವೆಯನ್ನು ಸೈನಿಕನಾಗಿ ಮಾತ್ರ ಮಾಡಬೇಕೆಂಬ ಕಲ್ಪನೆ ಇರಬಾರದು. ಭ್ರಷ್ಟ ರಹಿತ ದಕ್ಷ ಅಧಿಕಾರಿಯಾಗಿ ದೇಶ ಸೇವೆ ಮಾಡಬೇಕು ಹಾಗೂ ನಾವು ರೈತರನ್ನು ಮರೆಯಬಾರದು. ಗುರುವಿನ ಗುಲಾಮನಾಗುವ ಮೂಲಕ ಪರಿಪೂರ್ಣ ಜ್ಞಾನವನ್ನು ಪಡೆಯಬಹುದು. ಭಾರತೀಯ ದಾರ್ಶನಿಕರು, ತತ್ವಜ್ಞಾನಿಗಳು ವಿಜ್ಞಾನ, ಗಣಿತ ವಿಚಾರಧಾರೆಗಳನ್ನು ಮೊದಲೆ ತಿಳಿಸಿದವರು. ವಿಜ್ಞಾನಕ್ಕೆ ವಿಜ್ಞಾನವನ್ನು ತಿಳಿಸಿರುವ ಭವ್ಯ ಸಂಸ್ಕೃತಿ ನಮ್ಮ ಭಾರತೀಯರದ್ದು ಎಂದರು.
ದೀಪಪ್ರಜ್ವಲನೆ ಮಾಡಿದ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಪುರ್ಟಾಡೊ ಮಾತನಾಡಿ, ನಾನು ಶಿಕ್ಷಕ ಕುಟುಂಬದಿಂದ ಬಂದವನು. ಇಂದಿಗೂ ನನಗೆ ಶಿಕ್ಷಕ ವೃತ್ತಿ ಅಚ್ಚುಮೆಚ್ಚು, ಶಿಕ್ಷಕ ವೃತ್ತಿ ಶ್ರೇಷ್ಠ ಮತ್ತು ಜವಾಬ್ದಾರಿಯುತವಾದುದು. ಸಮಾಜವನ್ನು ಕಟ್ಟುವ ಹಾಗೂ ವಿದ್ಯಾರ್ಥಿಗಳನ್ನು ಬೆಳೆಸುವ ಸಂಸ್ಥೆಯ ಈ ಕಾರ್ಯ ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ, ಪರಿಪೂರ್ಣತೆಯ ಹಾದಿಯಲ್ಲಿ ನಡೆದರೆ ಯಶಸ್ಸು ಸಿಗಲು ಸಾಧ್ಯ ಎಂದರು.
ಎಕ್ಸೆಲ್ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲಾಧ್ಯಕ್ಷ ಸತೀಶ್ ಬೋಳಾರ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಭಾರತ ಎಸ್.ಶೆಟ್ಟಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಆರ್ ಟಿ.ಭಟ್, ಆಡಳಿತ ಮಂಡಳಿ ಸದಸ್ಯೆ ಸಹನಾ ಜೈನ್, ಪುಂಜಾಲಕಟ್ಟೆ ಕಾಲೇಜು ಉಪನ್ಯಾಸಕ ಧರಣೇಂದ್ರ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ| ನವೀನ್ ಕುಮಾರ್ ಮರಿಕೆ ಸ್ವಾಗತಿಸಿ, ಎಕ್ಸೆಲ್ ವಿದ್ಯಾಸಂಸ್ಥೆ ಕಾರ್ಯದರ್ಶಿ ಅಭಿರಾಮ್ ಬಿ.ಎಸ್. ವಂದಿಸಿದರು. ಉಪಾನ್ಯಾಸಕ ಮುನೀರ್ ನಿರೂಪಿಸಿದರು.ಎಕ್ಸೆಲ್ ವಿದ್ಯಾರ್ಥಿಗಳ ಪಾಲಕರಾದ 272 ಶಿಕ್ಷಕರಿಗೆ ಗೌರವಾರ್ಪಣೆಯನ್ನು ಸ್ವಾಮೀಜಿ ನೆರವೇರಿಸಿದರು. ಬಳಿಕ ಸಂಸ್ಕೃತಿಕ ಕಾರ್ಯಕ್ರಮ ನೆರವೇರಿತು.