ಒಕ್ಕಲಿಗ ಮುಖಂಡರಿಂದ ಆದಿಚುಂಚನಗಿರಿ ಶ್ರೀಗಳ ಭೇಟಿ

Suddi Udaya

ಧರ್ಮಸ್ಥಳದ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಹಲವಾರು ಸಂಘಟನೆಗಳು ಸಾಥ್ ನೀಡಿದ್ದು, ಸೌಜನ್ಯ ಹೋರಾಟ ಸಮಿತಿ ಹಾಗೂ ಜಿಲ್ಲೆಯ ಒಕ್ಕಲಿಗ ಗೌಡ ಸಂಘದ ಪದಾಧಿಕಾರಿಗಳು ಒಕ್ಕಲಿಗ ಸಮುದಾಯದ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಜಿಲ್ಲೆಯ ಎಲ್ಲಾ ತಾಲೂಕು, ಗ್ರಾಮ ಸಮಿತಿಗಳ ಪದಾಧಿಕಾರಿಗಳ ಸಹಿತ ಸೌಜನ್ಯ ಕುಟುಂಬ ಸೇರಿ ಸುಮಾರು 150 ಕ್ಕೂ ಹೆಚ್ಚು ಮಂದಿ ಒಕ್ಕಲಿಗ ಮುಖಂಡರು ಆದಿಚುಂಚನಗಿರಿ ಶ್ರೀಗಳನ್ನು ಭೇಟಿಯಾಗಿದ್ದು, ಸುದೀರ್ಘ ಕಾಲ ಮಾತುಕತೆ ನಡೆಸಲಾಯಿತು.

ಇಂತಹದೊಂದು ಹೇಯ, ಬರ್ಬರ ಕೃತ್ಯ ನಡೆದಿರುವುದು ಬೇಸರದ ವಿಚಾರವಾಗಿದೆ. ಇದು ಒಕ್ಕಲಿಗ ಸಮುದಾಯದ ಹುಡುಗಿಯ ಪ್ರಶ್ನೆ ಮಾತ್ರವಲ್ಲ. ಸಮಗ್ರ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ. ಸತ್ಯದ ಪರ ಮತ್ತು ನ್ಯಾಯದ ಪರ ಆದಿಚುಂಚನಗಿರಿ ಮಠ ಯಾವತ್ತೂ ನಿಲ್ಲುತ್ತದೆ ಎಂದು ಸ್ವಾಮೀಜಿ ಭರವಸೆ ನೀಡಿದರು..

ಸೌಜನ್ಯ ನ್ಯಾಯಕ್ಕಾಗಿ ಕಾನೂನು ತಜ್ಞರ ಸಲಹೆಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಘಟನೆಯ ಗಂಭೀರತೆ ಮನವರಿಕೆ ಮಾಡುವ ಹಾಗೂ ಆಕೆಯ ಸಾವಿನ ನ್ಯಾಯಕ್ಕಾಗಿ ಕಾನೂನಿನ ಮೂಲಕ ಆಗಬೇಕಾದ ಸೂಕ್ತ ವ್ಯವಸ್ಥೆಗಳನ್ನು ಪೂರೈಸುವ ಬಗ್ಗೆ ಶ್ರೀಗಳು ಭರವಸೆ ನೀಡಿದ್ದಾರೆ.

ಅಲ್ಲದೇ ಈಗಾಗಲೇ ನಡೆಯುತ್ತಿರುವ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಆಕೆ ಒಕ್ಕಲಿಗ ಸಮಾಜದ ಹುಡುಗಿ ಎನ್ನುವ ಯೋಚನೆ ಪಕ್ಕಕ್ಕಿಟ್ಟು ನಾವು ಯೋಚಿಸಬೇಕು. ಎಲ್ಲಾ ಸಮಾನ ಮನಸ್ಕರು ಸೇರಿ ನಡೆಸಿರುವ ಹೋರಾಟ ನಿಜಕ್ಕೂ ಶ್ಲಾಘನೀಯ. ಸಮಗ್ರ ಮರು ತನಿಖೆಗೆ ಒತ್ತಾಯ ಮಾಡುತ್ತಿರುವ ನಿಮ್ಮೆಲ್ಲ ಹೋರಾಟ ಫಲ ನೀಡಲಿದೆ. ಆಕೆಯ ನ್ಯಾಯಕ್ಕಾಗಿ ಬೇಕಾದ ಕಾನೂನು ಹೋರಾಟಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಶ್ರೀಗಳು ಭರವಸೆ ನೀಡಿದ್ದಾರೆ .

ಈ ಸಂದರ್ಭದಲ್ಲಿಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಉಪಾಧ್ಯಕ್ಷರಾದ ನಾರಾಯಣ ಗೌಡ ದೇವಸ್ಯ, ಕೃಷ್ಣಪ್ಪ ಗೌಡ ದೇವಸ, ಸವಣಾಲು, ಪ್ರಧಾನ ಕಾರ್ಯದರ್ಶಿ ಗಣೇಶ್ ಕಡಿರುದ್ಯಾವರ, ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಸಂಘಟನಾ ಕಾರ್ಯದರ್ಶಿ ಜಯಾನಂದ ಗೌಡ ಪ್ರಜ್ವಲ್, ಯುವರಾಜ್ ಅನಾರು, ಪ್ರಸನ್ನ ಗೌಡ ಬಾರ್ಯ, ಮಾಧವ ಗೌಡ ಬೆಳ್ತಂಗಡಿ, ಸುರೇಶ್ ಕೌಡಂಗೆ, ಗಣೇಶ್ ಕಲಾಯಿ, ಸಚಿನ್ ಕನ್ಯಾಡಿ, ರಾಘವ ಸವಣಾಲು, ನಾಗೇಶ್ ಗೌಡ ಸ್ವಾಮಿ ಪ್ರಸಾದ್ ಕೊಕ್ಕಡ ಉಪಸ್ಥಿತರಿದ್ದರು.

Leave a Comment

error: Content is protected !!