ಬೆಳ್ತಂಗಡಿ: ಎಸ್ ಡಿ ಎಮ್ ಶಾಲೆ ಬೆಳ್ತಂಗಡಿಯಲ್ಲಿ ಪರಿಸರ ಸ್ನೇಹಿ ಸ್ಕೌಟ್ ಗಣಪತಿಯ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗೈಡ್ ವಿದ್ಯಾರ್ಥಿಯಾದ ಸಹನ ಆಚಾರ್ಯರವರ ಗಣೇಶನ ಸ್ತೋತ್ರದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಗೈಡ್ ವಿದ್ಯಾರ್ಥಿಯಾದ ಪ್ರಾಪ್ತಿ ವಿ ಶೆಟ್ಟಿ ಯವರ ಕೈ ಚಳಕದಿಂದ ಮೂಡಿಬಂದಂತಹ ಪರಿಸರ ಸ್ನೇಹಿ ಗಣಪತಿಯು ಎಸ್ ಡಿ ಎಮ್ ಬೆಳ್ತಂಗಡಿಯ ಕಬ್ಸ್, ಬುಲ್ ಬುಲ್ಸ್, ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು ಪೂಜಿಸಿ ಆರಾಧಿಸಿ, ನೈವೇದ್ಯ , ಹಾಗೂ ಸ್ಕೌಟ್ ಗೈಡ್ ಸ್ವಯಂ ಸೇವೆಗೂ ಸಿದ್ದ ಹಾಗೂ ಕುಣಿತ ಭಜನೆಗೂ ಸೈ ಎಂಬಂತೆ ಕುಣಿತ ಭಜನೆಯಲ್ಲಿ ಗಣೇಶನ ಅನುಗ್ರಹವನ್ನು ಪ್ರಾರ್ಥಿಸಿ ಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ, ಜಿಲ್ಲಾ ಸಹಾಯಕ ಸ್ಕೌಟ್ ಆಯುಕ್ತ ಬಿ . ಸೋಮಶೇಖರ್ ಶೆಟ್ಟಿ ಆಗಮಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿ ಸೋಮಶೇಖರ್ ಶೆಟ್ಟಿಯವರು ವಿದ್ಯಾರ್ಥಿಗಳೇ ತಯಾರು ಮಾಡಿದ ಪರಿಸರ ಸ್ನೇಹಿ ಗಣಪತಿಯ ತಯಾರಿಕೆಯನ್ನು ಕಂಡು ವಿದ್ಯಾರ್ಥಿಗಳನ್ನು ಕೊಂಡಾಡಿದರು. ಅಲ್ಲದೇ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಪ್ರದಾಯ , ಆಚರಣೆ ಮುಂದಕ್ಕೂ ಬೆಳೆಯಬೇಕು ಎಂದು ಆಶಿಸಿ ಆಶೀರ್ವದಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ ಆರ್ ಸ್ಕೌಟ್ ಗೈಡ್ ನ ಪ್ರತಿಯೊಂದು ಚಟುವಟಿಕೆಗಳಿಗೂ ಪ್ರೋತ್ಸಾಹ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಸ್ಕೌಟ್ಸ್ ಮಾಸ್ಟರ್ ಮಂಜುನಾಥ್ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ,ಹಾಗೂ ಸ್ವಾಗತವನ್ನು ಗೈಡ್ ವಿದ್ಯಾರ್ಥಿಯಾದ ಪ್ರಾಪ್ತಿ ವಿ ಶೆಟ್ಟಿ ನೆರವೇರಿಸಿ ಕೊಟ್ಟರು. ಧನ್ಯವಾದವನ್ನು ಗೈಡ್ ವಿದ್ಯಾರ್ಥಿಯಾದ ಯಶ್ವಿತಾ ನೆರವೇರಿಸಿ ಕೊಟ್ಟರು. ಕುಣಿತ ಭಜನೆಯನ್ನು ಸ್ಕೌಟ್ ಗೈಡ್ ವಿದ್ಯಾರ್ಥಿಗಳು ನೆರವೇರಿಸಿದ್ದು, ಸ್ಕೌಟ್ ವಿದ್ಯಾರ್ಥಿಯಾದ ಆಶಿಷ್ ಆರ್ ಕಾಮತ್ ಹಾಗೂ ಕಬ್ ವಿದ್ಯಾರ್ಥಿಯಾದ ಶ್ರೀರಾಮ್ ಭಟ್ ರವರು ಕಾರ್ಯಕ್ರಮದಲ್ಲಿ ಪುರೋಹಿತರಾಗಿ ಸಹಕರಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಂಯೋಜಕ ಶಿಕ್ಷಕಿ ಶ್ರೀಮತಿ ಪ್ರಮೀಳಾ ಕಾರ್ಯಕ್ರಮವನ್ನು ಸಂಘಟಿಸಿದರು.