ಬೆಳ್ತಂಗಡಿ: ವಿದ್ಯೆಯೊಂದಿಗೆ ವಿನಯವೂ ಸೇರಿದಾಗ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಅನಂತ ಭಟ್ ಮಚ್ಚಿಮಲೆ ಹೇಳಿದರು. ಅವರು ವಾಣಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಜರುಗಿದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಮತ್ತು ಮಿತ್ರತ್ವ ಬೆಳೆಯಲು ಸಾಧ್ಯವಾಗುತ್ತದೆ. ಸೋಲು ಗೆಲುವಿನ ಕುರಿತು ಯೋಚನೆ ಮಾಡದೆ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪಠ್ಯದ ಜ್ಞಾನವನ್ನು ಮಾತ್ರ ಪಡೆಯುವುದಲ್ಲದೆ, ಪಠ್ಯೇತರ ಜ್ಞಾನವನ್ನು ಗಳಿಸಿಕೊಳ್ಳಬೇಕು ಎಂದರು.
ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಗೌಡ, ಜಿಲ್ಲಾ ಕ್ರೀಡಾ ಸಂಯೋಜಕರಾದ ಅರುಣ್ ಡಿಸೋಜ, ವಾಣಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ. ಕೆ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್.ಎಂ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಸ್ವಾಗತಿಸಿದರು. ಕ್ರೀಡಾ ಸಂಯೋಜಕರಾದ ನಂದಕುಮಾರ್ ವಂದಿಸಿದರು. ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.