ಬೆಳ್ತಂಗಡಿ: ಬೆಳ್ತಂಗಡಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ, ವಿವಿಧ ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಸಾಧನೆ ಮಾಡಿರುವ ಉಸ್ಮಾನ್ ಗರ್ಡಾಡಿ ಇವರು 2021 ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿಯಾಗಿ ಕಳೆದ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಸ್ಮಾನ್ ಗರ್ಡಾಡಿ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
ಸೆ.22 ರಂದು ಬೆಂಗಳೂರಿನ ಆರ್.ಎ ಮುಂಡ್ಕುರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿ ಬನ್ನೇರುಘಟ್ಟದಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಪರಮೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಉಸ್ಮಾನ್ ಅವರು ಗರ್ಡಾಡಿ ಗ್ರಾಮದ ನಿವಾಸಿಯಾಗಿದ್ದು ಗರ್ಡಾಡಿ,ಪಡಂಗಡಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿ ನಂತರ ವೇಣೂರಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು.2005 ರಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಗೆ ಸೇರ್ಪಡೆಗೊಂಡು ಪ್ರಾಥಮಿಕ ತರಭೇತಿಯನ್ನು ಶಿವಮೊಗ್ಗದಲ್ಲಿ ಮಾಡಿದ್ದಾರೆ. 17 ವರ್ಷಗಳ ಕಾಲ ಬೆಳ್ತಂಗಡಿಯಲ್ಲಿ ಸೇವೆಸಲ್ಲಿಸಿ ಕಳೆದ ವರ್ಷ ಬಂಟ್ವಾಳಕ್ಕೆ ವರ್ಗಾವಣೆಗೊಂಡಿದ್ದಾರೆ.