ಬೆಳ್ತಂಗಡಿ: ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡುವ ಕಾರ್ಯಕ್ರಮವು ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಅ.2ರಂದು ನಡೆಯಿತು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ರಾಜ್ಯದ 5 ನಗರಗಳ ಪೈಕಿ ಧರ್ಮಸ್ಥಳ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ಬಗ್ಗೆ ಆದೇಶ ಮಾಡಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಘೋಷಣೆ ಮಾಡಿದರು.
ವೇದಿಕೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ, ದ.ಕ.ಜಿ.ಪಂ ಸಿಎಓ ಪ್ರಸನ್ನ ಭಕ್ತ, ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್, ಬೆಳ್ತಂಗಡಿ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರಿಂದ ವಸ್ತು ಪ್ರದರ್ಶನ ವೀಕ್ಷಣೆ ಹಾಗೂ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪಿಸಲಾಯಿತು.
ಶ್ರೀ.ಕ್ಷೇತ್ರ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ಮೊಳಗಿತು ಹಾಗೂ ರಘುಪತಿ ರಾಘವ ರಾಜರಾಂ ಭಜನೆ ನಡೆಯಿತು. ಧರ್ಮಸ್ಥಳ ಗ್ರಾ.ಪಂ.ಉಪಾಧ್ಯಕ್ಷ ಪಿ.ಶ್ರೀನಿವಾಸ್ ರಾವ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಗ್ರಾ.ಪಂ ನ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಪಂ.ಅ.ಅಧಿಕಾರಿ ಉಮೇಶ್ ಕೆ ವಂದಿಸಿದರು.