ಬೆಳ್ತಂಗಡಿ: ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ದೇವಣ್ಣ ಗೌಡರ ಪುತ್ರ ಲೋಲಾಕ್ಷ ಎಂಬವರು ಹಳೆ ಮನೆ ತೆರವುಗೊಳಿಸಿ ನೂತನ ಮನೆ ನಿರ್ಮಾಣಕ್ಕೆ ಹಾಕಿದ ಪಂಚಾಂಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದುದನ್ನು ಶಾಸಕ ಹರೀಶ್ ಪೂಂಜ ಅವರ ಉಪಸ್ಥಿತಿಯಲ್ಲಿ ಮರು ನಿರ್ಮಿಸಿದ ಘಟನೆಯ ಬೆನ್ನಲ್ಲೆ ಅ.9ರಂದು ಅರಣ್ಯ ಇಲಾಖೆಯವರು ಮನೆ ತೆರವಿಗೆ ಸಚಿವರ ಆದೇಶ ಇದೆ ಎಂದು ಹೇಳಿ ಮತ್ತೆ ಮನೆ ತೆರವು ಕಾರ್ಯಾಚರಣೆಗೆ ಮುಂದಾಗುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಶಾಸಕರುಗಳು ಸ್ಥಳಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದ್ದು, ನಾಗರಿಕರ ಪ್ರತಿಭಟನೆ ಹಿನ್ನಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆಂಜ ಗ್ರಾಮದ ಅಮ್ಮಿನಡ್ಕ ಎಂಬಲ್ಲಿ ದೇವಣ್ಣ ಗೌಡರ ಪುತ್ರ ಲೋಲಾಕ್ಷ ಎಂಬವರು ಹಳೆ ಮನೆ ತೆರವುಗೊಳಿಸಿ ನೂತನ ಮನೆ ನಿರ್ಮಾಣಕ್ಕೆ ಹಾಕಿದ ಪಂಚಾಂಗವನ್ನು ಅರಣ್ಯಾಧಿಕಾರಿಗಳು ಕಿತ್ತೆಸೆದಿದ್ದರು. ಈ ವಿಷಯವನ್ನು ಅರಿತ ಶಾಸಕ ಹರೀಶ್ ಪೂಂಜ ಅವರು ಅ.7ರಂದು ಸ್ಥಳಕ್ಕೆ ಭೇಟಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು.
ಕಳೆಂಜ ಗ್ರಾಮದ ಅಮ್ಮಿನಡ್ಕ ಕುದ್ದಮನೆ ದೇವಣ್ಣ ಗೌಡ ಎಂಬವರ ಪುತ್ರ ಲೋಲಾಕ್ಷ ಕುಟುಂಬ ಸುಮಾರು 150 ವರ್ಷದ ಹಿಂದೆ ತಮ್ಮ ಸ್ವಾಧೀನದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಅ.6ರಂದು ಅರಣ್ಯ ಇಲಾಖೆ ಮನೆ ನಿರ್ಮಾಣಕ್ಕೆ ಹಾಕಿದ್ದ ಪಂಚಾಂಗವನ್ನು ಕಿತ್ತೆಸೆದು ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದರು. ಘಟನೆ ವಿಚಾರ ತಿಳಿದು ಶಾಸಕ ಹರೀಶ್ ಪೂಂಜ ಅ.7 ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸ್ಥಳದಲ್ಲೇ ಶೆಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಅರಣ್ಯ ಇಲಾಖೆ ಮತ್ತು ಶಾಸಕರ ಮಧ್ಯೆ ಬಿಸಿಯೇರಿದ ಮಾತಿನ ಚಕಮಕಿ ನಡೆಯಿತು. ಶಾಸಕರ ಉಪಸ್ಥಿತಿಯಲ್ಲಿ ಮನೆ ಪಂಚಾಂಗವನ್ನು ಮರು ನಿರ್ಮಿಸಲಾಗಿತ್ತು.
ಅ.9ರಂದು ಅರಣ್ಯ ಇಲಾಖೆಯವರು ಮನೆ ತೆರವು ಮಾಡಲು ಸಚಿವರ ಆದೇಶ ಮಾಡಿದ್ದಾರೆ ಎಂದು ಹೇಳಿ ಮನೆ ತೆರವು ಮಾಡಲು ಸ್ಥಳಕ್ಕೆ ಆಗಮಿಸುತ್ತಿರುವ ವಿಷಯ ತಿಳಿದ ಜಿಲ್ಲೆಯ ಬಿಜೆಪಿ ಶಾಸಕರು ಇದನ್ನು ವಿರೋಧಿಸಿ, ಸ್ಥಳಕ್ಕೆ ಆಗಮಿಸಿದರು. ಇಲಾಖೆಯವರು ಮನೆ ತೆರವಿಗೆ ಮುಂದಾಗುತ್ತಿದ್ದಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಮತ್ತು ಮನೆಯವರು ಸ್ಥಳೀಯರು ಇದನ್ನು ವಿರೋಧಿಸಿದರು. ಈ ಸಂದರ್ಭದಲ್ಲಿ ಮನೆ ತೆರವಿಗೆ ಮುಂದೆ ಬಂದ ಅಧಿಕಾರಿಗಳು ಎಂಎಲ್ಸಿ ಯವರನ್ನು ಕೈಯಿಂದ ದೂಡಿದ ಘಟನೆ ನಡೆದಿದ್ದು, ಇದನ್ನು ಶಾಸಕ ಹರೀಶ್ ಪೂಂಜ ಮತ್ತೀತರರು ಖಂಡಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು ಅರಣ್ಯ ಇಲಾಖೆಯವರು ಯಾವುದೇ ಆದೇಶ ಇಲ್ಲದೆ ಮನೆ ತೆರವುಗೊಳಿಸಲು ಮುಂದಾಗಿರುವುದು ಕಾನೂನು ರೀತಿಯಲ್ಲಿ ಸರಿಯಲ್ಲ, ನೋಟಿಸು ಕೊಟ್ಟು ಪ್ರಕ್ರಿಯೆ ಮಾಡಬೇಕಿತ್ತು, 50 ವರ್ಷದ ರಬ್ಬರ್ ಕೃಷಿ ಇದೆ. 150 ವರ್ಷ ಇಲ್ಲಿ ಜನ ವಾಸ್ತವ್ಯ ಇದ್ದಾರೆ. ಅರಣ್ಯ ಇಲಾಖೆಯ ದುರಂಕಾರದ ರೀತಿಯಲ್ಲಿ ವರ್ತಿಸುತ್ತಿದೆ. ಅರಣ್ಯ ಇಲಾಖೆಯವರು ಸಚಿವ ಈಶ್ವರ ಖಂಡ್ರೆಯವರ ಆದೇಶದಂತೆ ಮನೆ ತೆರವಿಗೆ ಬಂದಿದ್ದೇವೆ ಎಂದು ಹೇಳುತ್ತಿರುವುದು ಸಚಿವರು ಬಡವರ ಮನೆ ತೆಗೆಯಲು ಮಾಡಿರುವ ಹುನ್ನಾರ ಎಂದು ಆರೋಪಿಸಿ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದರೆ ಮನೆಯನ್ನು ನಾವೇ ತೆರವುಗೊಳಿಸಲು ಸಹಕರಿಸುತ್ತೇವೆ ಎಂದು ಹೇಳಿದರು. ಆದರೆ ಅರಣ್ಯ ಇಲಾಖೆ ಇದಕ್ಕೆ ಒಪ್ಪದಿರುವುದರಿಂದ ಸ್ಥಳೀಯ ನಾಗಕರಿಕರು ಹಾಗೂ ಊರವರು ಮನೆ ತೆರವುಗೊಳಿಸಲು ತೀವ್ರ ವಿರೋಧ ವ್ಯಕ್ತಪಡಿಸಿ ಅರಣ್ಯ ಇಲಾಖೆಯವರು ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಶಾಸಕರುಗಳಾದ ಹರೀಶ್ ಪೂಂಜ ಬೆಳ್ತಂಗಡಿ, ಭಾಗೀರಥಿ ಮುರುಳ್ಯ ಸುಳ್ಯ, ಭರತ್ ಶೆಟ್ಟಿ ಮಂಗಳೂರು, ರಾಜೇಶ್ ನಾಯ್ಕ್ ಬಂಟ್ವಾಳ, ಉಮಾನಾಥ ಕೋಟ್ಯಾನ್ ಮೂಡಬಿದ್ರೆ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್, ಶ್ರೀನಿವಾಸ ರಾವ್ ಸ್ಥಳೀಯ ಪಂಚಾಯತದವರು ಉಪಸ್ಥಿತರಿದ್ದಾರೆ.