ಬೆಳ್ತಂಗಡಿ : ನೆರಿಯ ಗ್ರಾಮದ ಅಣಿಯೂರು ಕೋಲೋಡಿ ಮತ್ತು ಪುಲ್ಲಾಜೆ ,ಕೋಲ್ನ ಎಂಬ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಆಗದೇ ನೂರಾರು ಕುಟುಂಬಗಳು ಮಳೆ ವೇಳೆ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಪಂಚಾಯತ್ ಆಡಳಿತ ಸ್ಪಂದಿಸಿಲ್ಲ ಎಂದು ಆರೋಪಿಸಿದ ನಾಗರಿಕರು ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ಅ.11ರಂದು ನೆರಿಯ ಪುಲ್ಲಾಜೆ ಯುವಕ ಬೈಕಿನಲ್ಲಿ ಹೊಳೆ ದಾಟುತ್ತಿರುವ ವೇಳೆಯಲ್ಲಿ ನೀರಿನಲ್ಲಿ ಸಿಲುಕಿಕೊಂಡು ಕೊಚ್ಚಿಕೊಂಡು ಹೋಗುವ ಪರಿಸ್ಥಿತಿಯಲ್ಲಿದ್ದು ಇದನ್ನು ತಿಳಿದ ಸ್ಥಳೀಯರು ಯುವಕನನ್ನು ಅಪಾಯದಿಂದ ಪಾರು ಮಾಡಿದ್ದರು.ಇದನ್ನು ತಿಳಿದ ಸ್ಥಳೀಯರು ತಕ್ಷಣ ಪಂಚಾಯಿತಿ ಅಧ್ಯಕ್ಷೆ ವಸಂತಿಯವರಿಗೆ ಸೇತುವೆ ನಿರ್ಮಿಸಲು ಮನವಿ ಮಾಡಿದ್ದರು. ಇದಕ್ಕೆ ಅಧ್ಯಕ್ಷೆ ಸರಿಯಾಗಿ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಅ.12 ರಂದು ಸಂಜೆ ಪಂಚಾಯಿತಿ ಮುಂಭಾಗ ಊರಿನವರು, ಏಕಾಏಕಿ ಪ್ರತಿಭಟನೆ ನಡೆಸಿ ತಕ್ಷಣ ಸೇತುವೆ ನಿರ್ಮಿಸುವ ಬಗ್ಗೆ ಪಂಚಾಯತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯು ರಾತ್ರಿ 8ಗಂಟೆವರೆಗೂ ಮುಂದುವರಿದು, ಸ್ಥಳಕ್ಕೆ ಗ್ರಾ.ಪಂಅಧ್ಯಕ್ಷೆ ವಸಂತಿ ಹಾಗೂ ಧರ್ಮಸ್ಥಳದ ಪೊಲೀಸ್ ಠಾಣೆಯ ಪಿಎಸ್ ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಭಟನೆ ಕೊನೆಗೊಂಡಿತು. ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದಿಂದ ಹೊರಗಡೆ ಇದ್ದ ವೇಳೆ ದೂರವಾಣಿ ಕರೆ ಬಂದಿದ್ದು, ಈ ಬಗ್ಗೆ ಹಿಂದಿರುಗಿ ಬಂದ ಬಳಿಕ ಮಾತನಾಡುವುದಾಗಿ ತಿಳಿಸಿದ್ದೆ. ಕೆಲವರು ಅದಾಗಲೇ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಧರ್ಮಸ್ಥಳ ಪೊಲೀಸರು ಆಗಮಿಸಿ ಮಾತುಕತೆ ನಡೆಸಿದಾ ಬಳಿಕ ಪ್ರತಿಭಟನೆ ಹಿಂದೆಗೆದು ಕೊಳ್ಳಲಾಯಿತು ಸದ್ಯ ಸೇತುವೆ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ಚರಲ್ ಹಾಕಿ ಪಂಚಾಯಿತಿ ವತಿಯಿಂದ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಲಾಗುವುದು. ಜಿಲ್ಲಾ ಪಂಚಾಯತಿ ಇಂಜಿನಿಯರ್ ಅವರನ್ನು ಕರೆಯಿಸಿ ಇಲ್ಲಿ ಸೇತುವೆ ನಿರ್ಮಾಣಕ್ಕೆ ತಗಲಬಹುದಾದ ಅಂದಾಜು ವೆಚ್ಚದ ಕುರಿತು ಪರಿಶೀಲಿಸಿ, ಇದು ಪಂಚಾಯಿತಿಯ ಸೀಮಿತ ಅನುದಾನದಲ್ಲಿ ನಿರ್ಮಿಸುವ ಹಾಗಿದ್ದಲ್ಲಿ ಪಂಚಾಯಿತಿ ವತಿಯಿಂದ ಸೇತುವೆ ನಿರ್ಮಿಸಲಾಗುವುದು. ಹೆಚ್ಚಿನ ಅನುದಾನದ ಅಗತ್ಯವಿದ್ದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕಿನ ಜನಪ್ರತಿನಿಧಿಗಳನ್ನು ಸಂಪರ್ಕಿಸಿ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ತಿಳಿಸಿದ್ದಾರೆ.