ವೇಣೂರು: ಗಂಭೀರ ಹೃದಯಾಘಾತವಾಗಿ ಜೀವಪಾಯದಲ್ಲಿದ್ದ ವ್ಯಕ್ತಿಯೋರ್ವರನ್ನು ಅಂಬ್ಯುಲೆನ್ಸ್‌ನಲ್ಲಿ ವೇಣೂರಿನಿಂದ ಕೇವಲ 40-45 ನಿಮಿಷಗಳಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತಲುಪಿಸಿದ ಪ್ರಸಾದ್ (ಪಚ್ಚು) ಕುಲಾಲ್ ರವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಕ್ಕೇಡಿ ಗ್ರಾಮದ ನಿವಾಸಿ ಹಿಂದೂ ಜಾಗರಣ ವೇದಿಕೆ ಹೆಸರಿನ ಅಂಬ್ಯುಲೆನ್ಸ್ ಚಾಲಕ ಪಚ್ಚು ಯಾನೆ ಪ್ರಸಾದ್ ಕುಲಾಲ್ ರವರು ಅ. 13 ರಂದು ಬೆಳಗ್ಗೆ 11.15ರ ಸುಮಾರಿಗೆ ವೇಣೂರು ನಮನ ಕ್ಲಿನಿಕ್‌ನಿಂದ ಅತ್ಯಂತ ಗಂಭೀರ ಸ್ವರೂಪದ ರೋಗಿಯನ್ನು ಕೇವಲ 45 ನಿಮಿಷಗಳಲ್ಲಿ ಅಂಬ್ಯುಲೆನ್ಸ್‌ನಲ್ಲಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತಲುಪಿಸಿ ಜೀವ ಉಳಿಸಿದ್ದಾರೆ.
ತೀವ್ರ ಹೃದಯನೋವು ಕಾಣಿಸಿಕೊಂಡಿದ್ದ ಪಡ್ಡಂದಡ್ಕ ಕಟ್ಟೆ ಬಳಿಯ ನಿವಾಸಿ ಹರೀಶ್ ಕಟ್ಟೆ ಅವರು ನಮನ ಕ್ಲಿನಿಕ್‌ಗೆ ಆಗಮಿಸಿ ಪ್ರಥಮ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ತುರ್ತಾಗಿ ಮಂಗಳೂರಿಗೆ ತಲುಸಿಲಾಗಿತ್ತು. ಸದ್ಯ ಹರೀಶ್ ಅವರು ಚೇತರಿಸಿಕೊಂಡಿರುವುದಾಗಿ ಮಾಹಿತಿ ಬಂದಿದ್ದು, ಪ್ರಸಾದ್ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಪಚ್ಚು ಯಾನೆ ಪ್ರಸಾದ್ ಕುಲಾಲ್ ಅವರು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.