ಶಿರ್ಲಾಲು :55 ಕೆಜಿ ವಿಭಾಗದ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾವಳಿ

Suddi Udaya

ಬೆಳ್ತಂಗಡಿ : ‘ ಬದುಕಿಗೆ ಬಹಳ ಹತ್ತಿರವಾದ ಕ್ರೀಡೆ ಕಬಡ್ಡಿ. ಕಬಡ್ಡಿಯಲ್ಲಿ ಕಾಲೆಳೆದು ಸೋಲಿಸುವಂತೆ ಬದುಕಿನಲ್ಲೂ ಕಾಲೆಳೆದು ನಮ್ಮನ್ನು ಸೋಲಿಸಲು ಹಲವಾರು ಕಾಯುತ್ತಿರುತ್ತಾರೆ. ಅದಕ್ಕೆ ಜಗ್ಗದೆ ಗೆಲುವನ್ನು ಪಡೆಯುವ ಕಡೆಗೆ ಸದಾ ಪ್ರಯತ್ನಶೀಲರಾಗಿರಬೇಕು’ ಎಂದು ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಹೇಳಿದರು.

ಅವರು ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಠಾರದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಮತ್ತು ಯುವವಾಹಿನಿ ಸಂಚಲನ ಸಮಿತಿ ಶಿರ್ಲಾಲು – ಕರಂಬಾರು ಇದರ ಆಶ್ರಯದಲ್ಲಿ ಬ್ರಹ್ಮ ಬೈದರ್ಕಳ ಗರಡಿ ಸಮಿತಿ ಶಿರ್ಲಾಲು ಕರಂಬಾರು, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ , ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಶಿರ್ಲಾಲು ಕರಂಬಾರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಯುವವಾಹಿನಿ ಸೇವಾ ಚಟುವಟಿಕೆಗಳ ಸಹಾಯಾರ್ಥ 55 ಕೆಜಿ ವಿಭಾಗದ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬೆಳ್ತಂಗಡಿ ಯುವವಾಹಿನಿ ಘಟಕದ ಅಧ್ಯಕ್ಷ ಅಶ್ವತ್ಥ್ ಕುಮಾರ್ ಮಾತನಾಡಿ, ‘ ಸಂಘಟನೆಗೆ ಶಕ್ತಿ ಕೊಡುವಲ್ಲಿ ಯುವವಾಹಿನಿ ಸಂಚಲನ ಸಮಿತಿಯ ಪಾತ್ರ ಮಹತ್ವದ್ದಾಗಿದೆ. ಕ್ರೀಡಾ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ಬಡ ಕುಟುಂಬಗಳಿಗೆ ಆರೋಗ್ಯ, ವಿದ್ಯಾನಿಧಿಯ ಮೂಲಕ ಸ್ಪಂದನೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶೇಖರ ಕುಕ್ಕೇಡಿ ಮಾತನಾಡಿ, ‘ನಾರಾಯಣ ಗುರುಗಳ ತತ್ವ ಸಿದ್ಧಾಂತ ಅನುಷ್ಟಾನ ಮಾಡುವುದರಲ್ಲಿ ಯುವವಾಹಿನಿ ಪಾತ್ರ ಮುಖ್ಯವಾದುದು. ಯಾವುದೇ ಒಂದು ಸಮುದಾಯವನ್ನು ಸೀಮಿತಗೊಳಿಸದೆ ಎಲ್ಲಾ ಸಮಾಜ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಿ ಕಬಡ್ಡಿ ಪಂದ್ಯಾಟ ಆಯೋಜನೆ ಮಾಡಿರುವುದು ಜಾತ್ಯತೀತ ಸಮಾಜದ ಕಾರ್ಯಕ್ಕೆ ಪೂರಕವಾಗಿದೆ’ ಎಂದರು.
ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿ ಅಧ್ಯಕ್ಷ ಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಶಿರ್ಲಾಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೋಮನಾಥ ಬಂಗೇರ, ಶಿರ್ಲಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಾಧವ ಕುಲಾಲ್, ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕ ಗುರು ಪ್ರಸಾದ್ ಪಾಳೆಂಜ, ಶಿರ್ಲಾಲು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಹರೀಶ್ ಕಲ್ಲಾಜೆ, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಕುಶಲ ರಮೇಶ್ ಪೂಜಾರಿ ಇದ್ದರು.

ಸುನಂದ ಆನಂದ ಆಚಾರಿ ಇವರಿಗೆ ಆರೋಗ್ಯ ನಿಧಿ ಹಸ್ತಾಂತರಿಸಲಾಯಿತು.

ಶಿರ್ಲಾಲಿನ ಕಬಡ್ಡಿ ತಂಡವಾಗಿದ್ದ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಹಾಗೂ ಯುವ ಸಮುದಾಯಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕಾಗಿ ಬೆಳ್ತಂಗಡಿ ಯುವವಾಹಿನಿ ಘಟಕವನ್ನು, ತೀರ್ಪುಗಾರರಾಗಿ ಸಹಕರಿಸಿದ ಜಿಲ್ಲಾ ಅಮೇಚೂರು ಕಬಡ್ಡಿ ಅಸೋಸಿಯೇಷನ್ ನ ರೂಪೇಶ್, ಮಹೇಶ್, ಶಶಿಧರ್, ನಿಶ್ಚಿತ್, ರವಿಚಂದ್ರ, ಪ್ರಸಾದ್ ಹಾಗೂ ವೀಕ್ಷಕ ವಿವರಣೆ ನೀಡಿದ ವಿಜೇತ್ ಉಪ್ಪಿನಂಗಡಿ, ನಿಸಾರ್ ಅಳದಂಗಡಿ, ಸತೀಶ್ ಕುತ್ಲೂರು ಇವರನ್ನು ಗೌರವಿಸಲಾಯಿತು.

ಶಿರ್ಲಾಲು – ಕರಂಬಾರು ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಪಾಲನೆ ಹಾಗೂ ಯುವವಾಹಿನಿ ಸಂಚಲನ ಸಮಿತಿ ಪ್ರಧಾನ ಕಾರ್ಯದರ್ಶಿ ಯತೀಶ್ ಶಿರ್ಲಾಲು ಸನ್ಮಾನಿತರನ್ನು ಪರಿಚಯಿಸಿದರು. ಯುವ ಬಿಲ್ಲವ ವೇದಿಕೆ ಪ್ರಧಾನ ಕಾರ್ಯದರ್ಶಿ ಜ್ಞಾನೇಶ್ ಕಟ್ಟ ಸ್ವಾಗತಿಸಿದರು. ಯುವವಾಹಿನಿ ಸಂಚಲನ ಸಮಿತಿಯ ನಿರ್ದೇಶಕ ಪ್ರಸಾದ್ ಕರಂಬಾರು ಹಾಗೂ ಮಾಜಿ ಅಧ್ಯಕ್ಷ ವಿಜಯ ಕುಮಾರ್ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕಟ್ರಬೈಲ್ ವಂದಿಸಿದರು.

ಫಲಿತಾಂಶ:

ಶ್ರೀ ಲಕ್ಷ್ಮೀ ನಾರಾವಿ ಪ್ರಥಮ, ಶ್ರೀ ವಿನಾಯಕ ಕೆದ್ದು ದ್ವಿತೀಯ ಸ್ಥಾನವನ್ನು, ಗುಡ್ಡಾಜೆ ಎ ತಂಡ ತೃತೀಯ ಹಾಗೂ ಗುಡ್ಡಾಜೆ ಬಿ ತಂಡ ಚತುರ್ಥ ಸ್ಥಾನ ಪಡೆದವು. ನಿತೇಶ್ ಸವ್ಯಸಾಚಿ ಆಟಗಾರ ಪ್ರಶಸ್ತಿ ಪಡೆದರು.

Leave a Comment

error: Content is protected !!