ಉಜಿರೆ ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಇದರ ವತಿಯಿಂದ ಪೌರತ್ವ ತರಬೇತಿ ಶಿಬಿರ ಸಮಾರೋಪ ಸಮಾರಂಭ

Suddi Udaya

ಉಜಿರೆ: ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಇದರ ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ರತ್ನಮಾನಸ ವಿದ್ಯಾರ್ಥಿನಿಲಯದಲ್ಲಿ 3 ದಿನದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ ಹರ್ಷೇಂದ್ರ ಕುಮಾರ್ ರವರು ಮಾನವ ಸಂಪನ್ಮೂಲವಾಗುವುದು ಶಿಕ್ಷಣದ ಮತ್ತು ಅನುಭವದ ಮೂಲಕ. ಉತ್ತಮ ಶಿಕ್ಷಕರಷ್ಟೇ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಬಲ್ಲರು. ಪೌರತ್ವ ಎಂದರೇ ಒಬ್ಬ ಪ್ರಜೆಯು ತನ್ನಲ್ಲಿ ಅಳವಡಿಸಿಕೊಂಡಿರಬೇಕಾದ ಜೀವನ ಮೌಲ್ಯಗಳು ಮತ್ತು ಜೀವನ ಕೌಶಲ್ಯಗಳು. ಜೀವನ ಶಿಕ್ಷಣದ ಕೇಂದ್ರವಾದ ರತ್ನಮಾನಸದಲ್ಲಿ ಪೌರತ್ವ ತರಬೇತಿ ಶಿಬಿರ ಆಯೋಜಿಸಿರುವುದು ಅಭಿನಂದನೀಯವಾಗಿದೆ. ಸಂಸ್ಕಾರ-ಸಂಸ್ಕೃತಿಯನ್ನು, ಬದುಕುವ ಕಲೆಯನ್ನು ಈ ಶಿಬಿರ ಕಲಿಸಿಕೊಟ್ಟಿದೆ ಎಂದು ನನ್ನ ಅನಿಸಿಕೆ. ವಿದ್ಯಾವಂತರಾದ ನಾವು ವಿಚಾರವಂತರಾಗುವುದರ ಜೊತೆಗೆ ಆಚಾರವಂತರೂ ಆಗಬೇಕು. ಜೀವನದಲ್ಲಿ ಕಷ್ಟ ಸುಖಗಳು ಬಂದಾಗ ಸಮಚಿತ್ತರಾಗಿದ್ದು ಜೀವನದಲ್ಲಿ ಸಂತೋಷವಾಗಿರುವುದನ್ನು ಕಲಿಯಿರಿ ಎಂದು ಅಧ್ಯಕ್ಷರು ನುಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ ಸೋಮಶೇಖರ ಶೆಟ್ಟಿ ರವರು ಮಾತನಾಡುತ್ತಾ ನಮ್ಮ ಹಕ್ಕುಗಳು ಮತ್ತು ಕರ್ತ್ಯವ್ಯಗಳ ಬಗ್ಗೆ ಮನವರಿಕೆ ಮಾಡಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ. ವ್ಯಕ್ತಿತ್ವ ಎಂದರೆ ವ್ಯಕ್ತಿಯಲ್ಲಿರುವ ತತ್ವಗಳು. ಇಲ್ಲಿ ದೊರೆತಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ. ತಾನು ಬೆಳೆಯಬೇಕೆಂಬ ಕನಸಿನ ಜೊತೆಗೆ ಇನ್ನೊಬ್ಬರನ್ನು ಬೆಳೆಸಬೇಕು ಎನ್ನುವ ಮನಸ್ಸಿರಬೇಕು ಎಂದು ತಿಳಿಸುತ್ತಾ ಶಿಬಿರದ ಯಶಸ್ಸಿಗೆ ಅಭಿನಂದಿಸಿದರು.


ಬಿ.ಎಡ್. ಸಂಸ್ಥೆಯ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಸಮಾರೋಪ ಭಾಷಣ ಮಾಡುತ್ತಾ ಶಿಬಿರಕ್ಕೆ ಮಾರ್ಗದರ್ಶನ ಮಾಡಿದ ಆಡಳಿತ ಮಂಡಳಿ, ರತ್ನಮಾನಸ ನಿಲಯಪಾಲಕರು, ಸಹೋದ್ಯೋಗಿಗಳು ಹಾಗೂ ಶಿಬಿರಾರ್ಥಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಶಿಬಿರಾರ್ಥಿಗಳಿಗೆ ಶಿಬಿರದಲ್ಲಿ ದೊರೆತ ಅನುಭವ, ಜೀವನ ಶಿಕ್ಷಣ, ಹೊಂದಾಣಿಕೆಯ ಮನೋಭಾವನೆ, ಮಾನವೀಯ ಮೌಲ್ಯಗಳು, ಮುಂದಿನ ವೃತ್ತಿ ಜೀವನದಲ್ಲಿ ತುಂಬಾ ಅನುಕೂಲವಾಗಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಶಿಬಿರಾರ್ಥಿಗಳಾದ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಸಹನಾ ಮರಿಯಾ ಡಿಸೋಜಾ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ದಿವ್ಯಾ ಹೆಬ್ಬಾರ್ ರವರು ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ನಿಲಯಪಾಲಕರಾದ ಯತೀಶ್ ಕೆ ಬಳಂಜ, ಶಿಬಿರಾಧಿಕಾರಿಗಳಾದ ತಿರುಮಲೇಶ್ ರಾವ್ ಎನ್ ಕೆ, ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಪ್ರಕಾಶ್ ಕಾಮತ್, ಎಸ್.ಡಿ.ಎಂ. ಡಿ.ಎಡ್. ಕಾಲೇಜಿನ ಪ್ರಾಂಶುಪಾಲಾರಾದ ಸ್ವಾಮಿ ಕೆ ಎ, ಉಪನ್ಯಾಸಕಿಯರಾದ ಶ್ರೀಮತಿ ವಿದ್ಯಾಶ್ರೀ ಪಿ, ಶ್ರೀಮತಿ ಅನುಷಾ ಡಿ ಜೆ ಹಾಗೂ ವಿದ್ಯಾರ್ಥಿ ನಾಯಕರಾದ ಸಾರ್ಥಕ್ ಮತ್ತು ಕೀರ್ತನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ತಂಡಗಳಿಗೆ ಅಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.


ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಅಜಿತ ವಿ ಸ್ವಾಗತಿಸಿ, ತೀರ್ಥಕುಮಾರಿ ಎನ್ ವಂದಿಸಿ, ಕೀರ್ತನ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

error: Content is protected !!