ಬೆಳ್ತಂಗಡಿ: ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯಕ್ಕೊಳಗಾದ ಬಡ ಕುಟುಂಬದ ಪರವಾಗಿ ನಿಂತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ಮುಖಾಂತರ ಕೇಸು ದಾಖಲಿಸಿದ ಕಾಂಗ್ರೆಸ್ ಸರಕಾರದ ನೀತಿಯನ್ನು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಎಂ. ಖಂಡಿಸಿದ್ದಾರೆ.
ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ಕಂಡಾಗ ನಾವು ಪ್ರಜಾಪ್ರಭುತ್ವ ರಾಜ್ಯದಲ್ಲಿದ್ದೇವಾ ಅಥವಾ ಗೂಂಡಾ ಪ್ರಕೃತಿಯ ರಾಜ್ಯದಲ್ಲಿದ್ದೇವಾ ಎಂದು ಸಂಶಯ ಬರುತ್ತಿದೆ. ನಮ್ಮ ಕ್ಷೇತ್ರದ ಬಡ ಕುಟುಂಬದ ಪರವಾಗಿ ನಿಂತು ಅರಣ್ಯ ಅಧಿಕಾರಿಗಳ ದೌರ್ಜನ್ಯವನ್ನು ನಿಲ್ಲಿಸಿದ ಶಾಸಕ ಹರೀಶ್ ಪೂಂಜರವರ ನಡೆ ಸರಿಯಾಗಿದೆ. ಜನರ ಮೇಲೆ ಸರಕಾರಿ ಅಧಿಕಾರಿಗಳು ದೌರ್ಜನ್ಯವೆಸಗಿದಾಗ ಶಾಸಕರು ಕೈಕಟ್ಟಿ ಕೂರಬೇಕಾ?, ಸರಕಾರಿ ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಸರಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿರುವುದು ದುರಾದೃಷ್ಟ. ಶಿವಮೊಗ್ಗದಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಮೇಲೆ ಕಲ್ಲು ಎಸೆದ ಮತಾಂದರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಹಿಂದೇಟು ಹಾಕಿದ್ದನ್ನು ಅಧಿಕಾರಿಗಳು ನೆನಪು ಮಾಡಿಕೊಳ್ಳಿ ಸರಕಾರಿ ಅಧಿಕಾರಿಗಳಿಗೆ ಜನರೇ ರಕ್ಷಣೆ ನೀಡುವುದು ಹೊರತು ಸರಕಾರ ರಕ್ಷಣೆ ನೀಡುವುದಿಲ್ಲ. ಆದುದರಿಂದ ಜನರ ಜೊತೆ ನಿಂತ ಶಾಸಕ ಹರೀಶ್ ಪೂಂಜ ರವರ ಮೇಲೆ ದಾಖಲಿಸಿದ ಕರ್ತವ್ಯಕ್ಕೆ ಅಡ್ಡಿ ಮಾಡಿದರೆಂಬ ಸುಳ್ಳು ಪ್ರಕರಣವನ್ನು ಸರಕಾರ ಕೂಡಲೇ ಕೈಬಿಡಬೇಕೆಂದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.