ಬೆಳ್ತಂಗಡಿ : ‘ಮಾತಿನ ಕಲೆ ಬದುಕು ರೂಪಿಸುವ ಕಲೆ. ನಮ್ಮೊಳಗಿನ ಮಾತನ್ನು ವ್ಯಕ್ತಿತ್ವ ರೂಪಿಸುವ ಬಂಡವಾಳವಾಗಿ ರೂಪುಗೊಳಿಸಬೇಕು. ಹಾಗಾಗಿ ಶಾಲಾ ಕಾಲೇಜು ವಲಯದಲ್ಲಿ ಸಿಗುವ ಭಾಷಣ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಯ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಸಮಾಜದ ಉತ್ತಮ ಮಾತುಗಾರರಾಗಿ ಮೂಡಿಬರಬೇಕು’ ಎಂದು ಮಾಜಿ ಶಾಸಕ, ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ಮತ್ತು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಇದರ ದಶಮಾನೋತ್ಸವದ ಪ್ರಯುಕ್ತ ನಡೆದ ಅಂತರ್ ಕಾಲೇಜು ಭಾಷಣ ಮತ್ತು ಚರ್ಚಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿರು.
ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಸಹ ಶಿಕ್ಷಕ ಡಾ. ಪ್ರವೀಣ್ ಮಾತನಾಡಿ, ‘ ಸಂಸ್ಥೆ ಚಿಕ್ಕದಾದರೂ ಉತ್ತಮ ಆಲೋಚನೆ ಮತ್ತು ಗುರಿಯನ್ನು ಹೊಂದಿದೆ. ಭಾಷಣ ಕೇವಲ ಮಾತಿಗೆ ಸೀಮಿತವಾಗಿರದೆ ಅದರ ವಿಚಾರಗಳನ್ನು ತನ್ನ ಬದುಕಿನಲ್ಲಿ ರೂಡಿಸಿಕೊಳ್ಳಬೇಕು’ ಎಂದರು.
ಬೇರೆ ಬೇರೆ ಕಾಲೇಜಿನ ಸ್ಪರ್ಧಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಗುರುದೇವ ಕಾಲೇಜಿನ ಹಸ್ತವಿ, ದ್ವಿತೀಯ ಸ್ಥಾನವನ್ನು ಪುತ್ತೂರು ಅಂಬಿಕಾ ಮಹಾವಿದ್ಯಾಲಯದ ಪಂಚಮಿ ಬಾಕಿಲಪದವು, ತೃತೀಯ ಸ್ಥಾನವನ್ನು ಪುಂಜಾಲಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶುರಾ ಬಿ. ಬಿ., ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಸ್ಪರ್ಶ ಮತ್ತು ಮನೋಜ್, ದ್ವಿತೀಯ ಸ್ಥಾನವನ್ನು ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಹಸ್ತವಿ ಮತ್ತು ಚಂದನಾ, ತೃತೀಯ ಸ್ಥಾನವನ್ನು ಉಜಿರೆ ಎಸ್.ಡಿ.ಎಂ ಕಾಲೇಜಿನ ಮಂಜುನಾಥ್ ಮತ್ತು ನಾಗ ಶ್ರೀ ಪಡೆದುಕೊಂಡರು.
ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಪ್ರಸ್ತಾವಿಕವಾಗಿ ಮಾತನಾಡಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಹಾಗೂ ಕಾರ್ಯಕ್ರಮ ಸಂಯೋಜಕಿ ಬಬಿತಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಪವಿತ್ರ ಕಾರ್ಯಕ್ರಮ ನಿರೂಪಿಸಿ, ಮನುಜ ವಿಜೇತರ ಪಟ್ಟಿ ವಾಚಿಸಿದರು. ಸೌಮ್ಯ ವಂದಿಸಿದರು.