ನೀವು ಯಾವ ದೇವಸ್ಥಾನ, ಯಾವ ರೀತಿಯ ಪ್ರಮಾಣ ಮಾಡಲು ಹೇಳುತ್ತೀರಿ ಅದಕ್ಕೆ ನಾನು ಸದಾ ಸಿದ್ಧ: ಶಾಸಕ ಹರೀಶ್ ಪೂಂಜರಿಗೆ ಮಾಜಿ ಶಾಸಕ ವಸಂತ ಬಂಗೇರ ಪತ್ರಿಕಾಗೋಷ್ಠಿಯಲ್ಲಿ ಪ್ರತಿ ಸವಾಲು

Suddi Udaya


ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಕೆಲವೊಂದು ಆರೋಪಗಳನ್ನು ನನ್ನ ಮೇಲೆ ಮಾಡಿ, ನನ್ನನ್ನು, ನನ್ನ ಪತ್ನಿ ಮಕ್ಕಳನ್ನು ಪ್ರಮಾಣಕ್ಕೆ ಕರೆದಿದ್ದಾರೆ. ಆದರೆ ಇದು ನನ್ನ ಮತ್ತು ಹರೀಶ್ ಪೂಂಜರ ವಿಷಯ, ನಮ್ಮ ಸಂಸಾರ ಇದಕ್ಕೆ ಬೇಡ, ನೀವು ಯಾವ ದೇವಸ್ಥಾನ, ಯಾವ ಸಮಯ, ಯಾವ ರೀತಿಯ ಪ್ರಮಾಣ ಮಾಡಲು ಹೇಳುತ್ತೀರಿ ಅದಕ್ಕೆ ನಾನು ಸದಾ ಸಿದ್ಧವಾಗಿದ್ದೇನೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಪ್ರತಿ ಸವಾಲು ಹಾಕಿದ್ದಾರೆ.

ಅವರು ಅ.21ರಂದು ಬೆಳ್ತಂಗಡಿ ಪ್ರವಾಸಿಮಂದಿರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹರೀಶ್ ಪೂಂಜರವರು ಪ್ರೆಸ್‌ಮೀಟ್ ಮಾಡಿ ಕೆಲ ಸಮಯ ಕಳೆಯಿತು. ನಾನು ಇದಕ್ಕೆ ಶೀಘ್ರವಾಗಿ ಉತ್ತರಿಸಬೇಕಿತ್ತು. ಆದರೆ ಆಗಿಲ್ಲ, ಬಂಗೇರ ಓಡಿ ಹೋದ ಎಣಿಸುವುದು ಬೇಡ, ಹರೀಶ್ ಪೂಂಜರನ್ನು ಎದುರಿಸುವ ಶಕ್ತಿ ನನ್ನಲ್ಲಿ ಇದೆ. ನೀವು ಆದಷ್ಟು ಶೀಘ್ರ ನನ್ನನ್ನು ಕರೆಯಿರಿ, ಯಾವ ರೀತಿಯ ಪ್ರಮಾಣಕ್ಕೂ ನಾನು ತಯಾರಿದ್ದೇನೆ. ಆದರೆ ನನ್ನನ್ನು ಕರೆಯುವಾಗ ಯೋಚನೆ ಮಾಡಿ ಕರೆಯಿರಿ ಎಂದು ಎಚ್ಚರಿಕೆ ನೀಡಿದರು.
ಧರ್ಮಸ್ಥಳ-ನಾರಾವಿ ಕೆಎಸ್ಸಾರ್ಟಿಸಿ ಬಸ್ಸು ನಾನು ಮಂಜೂರು ಮಾಡಿದ್ದು ಎಂದು ಪೂಂಜರು ಹೇಳಿದ್ದಾರೆ. 2018-19ರಲ್ಲಿ ಅರ್ಜಿ ಸಲ್ಲಿಸಿದ್ದೆ ಎಂದು ಅವರೇ ಹೇಳಿದ್ದಾರೆ. ಒಂದು ಬಸ್ಸು ಮಂಜೂರಾತಿಗೆ ಮೂರು ವರ್ಷ ಬೇಕಾ, ಆಗ ಯಾರ ಸರಕಾರ ಇತ್ತು. ಆಗ ಯಾಕೆ ಇವರಿಗೆ ಮಂಜುರಾತಿ ಮಾಡಲು ಸಾಧ್ಯವಾಗಲಿಲ್ಲ. ಪುತ್ತೂರು, ಧರ್ಮಸ್ಥಳ ಡಿಪ್ಪೋದಲ್ಲಿ ಕೆಲ ಬಿಜೆಪಿ ಬೆಂಬಲಿತ ಅಧಿಕಾರಿಗಳಿದ್ದಾರೆ. ಅವರು ಶಾಸಕರು ಮಂಜೂರು ಮಾಡಿದ್ದು ಎಂದು ಹೇಳಿದ್ದಾರೆ. ಆದರೆ ಬಸ್ಸು ಮಂಜೂರು ಮಾಡಿದ್ದು ನಾನು, ಉದ್ಘಾಟನೆಯನ್ನು ರದ್ದುಗೊಳಿಸಿದ್ದು ನಾನೇ, ಬಸ್ಸು ಉದ್ಘಾಟನೆ ದಿನ ಸಚಿವರೇ ಮಂಜೂರಾತಿ ಬಗ್ಗೆ ಸ್ವಷ್ಟನೆ ಕೊಟ್ಟಿದ್ದಾರೆ ಎಂದು ಬಂಗೇರ ತಿಳಿಸಿದರು.

ಅಪ್ಪ ಹೇಳಿದ್ರ ಅಥವಾ ಪಾರ್ಟನರ್ ಹೇಳಿದ್ರಾ:

ನಾನು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವಾಗ ಮೂಲ ಕಾಂಗ್ರೆಸ್ಸಿಗರ ಬಾಗಿಲು ತಟ್ಟಿದ್ದೇನೆ ಎಂದು ಪೂಂಜರು ಆರೋಪಿಸಿದ್ದಾರೆ. ಆದರೆ ನಾನು ಯಾವುದೇ ಕಾಂಗ್ರೆಸ್ಸಿಗರ ಬಾಗಿಲು ತಟ್ಟಿಲ್ಲ, ನಾನು ಯಾರ ಬಾಗಿಲನ್ನು ತಟ್ಟಿದ್ದೇನೆ ಎಂದು ಶಾಸಕರು ಬಹಿರಂಗ ಪಡಿಸಲಿ, ನಾನು ಕಾಂಗ್ರೆಸ್ಸಿಗೆ ಬರುವಾಗ ಒಂದು ಬಾರಿ ಅವಕಾಶ ಕೊಡಿ ಮುಂದಿನ ಬಾರಿ ಬಿಟ್ಟು ಕೊಡುತ್ತೇನೆ ಎಂದು ಹೇಳಿದ್ದೆ ಎಂದು ಪೂಂಜರು ಆರೋಪಿಸಿದ್ದಾರೆ. ಆದರೆ ನಾನು ಈ ರೀತಿ ಯಾರಲ್ಲಿಯೂ ಹೇಳಿಲ್ಲ, ಯಾರಿಗೂ ಆಶ್ವಾಸನೆ ಕೊಟ್ಟು ಶಾಸಕನಾಗಿಲ್ಲ, ಜಿಲ್ಲೆಯ ಮೂಲ ಕಾಂಗ್ರೆಸ್ಸಿಗರಿಗೂ ಆಶ್ವಾಸನೆ ಕೊಟ್ಟಿಲ್ಲ, ನಮ್ಮ ಪಕ್ಷದಲ್ಲಿ ಅಪ್ಪ-ಮಗ ಇದ್ದಾರೆ. ಕಳೆದ ಚುನಾವಣೆಯಲ್ಲಿ ವಿರೋಧ ಕೆಲಸ ಮಾಡಿದ್ದಾರೆ. ಅವರು ಹೇಳಿದ್ದಾರೆಯೇ ಬಹಿರಂಗ ಪಡಿಸಿ ಪೂಂಜರೇ, ಈ ರೀತಿ ತಪ್ಪು ಮಾಹಿತಿ ಕೊಡಬಾರದು ಪೂಂಜರೇ ಈ ವಿಚಾರ ಅಪ್ಪ ಹೇಳಿದ್ರ ಅಥವಾ ನಿಮ್ಮ ಪಾರ್ಟನರ್ ಹೇಳಿದ್ರ ಎಂದು ಬಂಗೇರ ಪ್ರಶ್ನಿಸಿದರು.
ನನ್ನನ್ನು ಕಾಂಗ್ರೆಸ್ಸಿಗೆ ಗಂಗಾಧರ ಗೌಡರು ಕರೆಯಲಿಲ್ಲ, ಕುರಿಯನ್ ಅವರು ಒತ್ತಾಯ ಮಾಡಿದ್ದರು. ನಾನು ಚರ್ಚಿಸಿ, ಹರೀಶ್ ಕುಮಾರ್‌ಗೆ ತಿಳಿಸಿದ್ದೇನೆ. ಅವರು ಒಪ್ಪಿಗೆ ಕೊಟ್ಟ ನಂತರವೇ ನಾನು ಕಾಂಗ್ರೆಸ್ ಸೇರಿದ್ದೇನೆ. 2018ರಲ್ಲಿ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕೆಪಿಸಿಸಿ ವೀಕ್ಷಕರ ಎದುರೇ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಹರೀಶ್ ಕುಮಾರ್‌ರಿಗೆ ಸೀಟು ಕೊಡಿ ಲಿಸ್ಟ್‌ನಲ್ಲಿ ಫಸ್ಟ್‌ಗೆ ಅವರ ಹೆಸರು ಹಾಕಿ ಎಂದು ಹೇಳಿದ್ದೆ. ಆದರೆ ಅವರು ಒಪ್ಪಿಲ್ಲ, ನನ್ನ ಹೆಸರು ಹಾಕಿ ಕಳುಹಿಸಿದ್ದರು. ನಾನು ಸ್ಪರ್ಧಿಸಬೇಕಾಯಿತು ಎಂದು ಬಂಗೇರ ಸ್ವಷ್ಟಿಕರಿಸಿದರು.
ಮಜಾ ರಾಜಕಾರಣ ಮಾಡಿಲ್ಲ:
ನಾನು ಮಜಾ ರಾಜಕಾರಣ ಮಾಡಿದ್ದೇನೆ. ಸುಳ್ಳಿನ ಗೋಪುರ ಕಟ್ಟಿದ್ದೇನೆ ಎಂದು ಶಾಸರು ಹೇಳಿದ್ದಾರೆ. ಮಜಾ ರಾಜಕಾರಣ ಎಂದರೆ ಏನು ಎಂದು ಹೇಳಿ, ಅಡ್ಡಗೋಡೆಯಲ್ಲಿ ದೀಪ ಇಟ್ಟಂತೆ ಹೇಳಬೇಡಿ, ನನ್ನ ಆಫೀಸಿನಲ್ಲಿ ಬಾಗಿಲಿಗೆ ಸ್ಟೂಲ್ ಇಟ್ಟರೆ ಯಾರೂ ಒಳಗೆ ಹೋಗಬಾರದು ಎಂದಿದ್ದಾರೆ. ನನ್ನ ಆಫೀಸಿನ ಒಳಗೆ ಗ್ಲಾಸ್ ಇರುವಂತದು. ಪೂಂಜರನ್ನು ಆಹ್ವಾನಿಸುತ್ತೇನೆ ಬಂದು ನೋಡಲಿ. ಆ ರೀತಿಯ ರಾಜಕಾರಣ ನಾನು ಮಾಡುವುದಿಲ್ಲ, ಬೆಳ್ತಂಗಡಿ ಐ.ಬಿಯ ಕಂಬ, ಬೆಂಗಳೂರಿನ ಎಲ್.ಹೆಚ್‌ನ ಕಂಬಗಳು ಮಜಾ ರಾಜಕಾರಣವನ್ನು ಹೇಳುತ್ತೇವೆ ಎಂದಿದ್ದಾರೆ. ಅವರು ಬರಲಿ ಬೆಂಗಳೂರಿನಲ್ಲಿ ಡ್ರೈವರ್‌ಗಳನ್ನು ಒಟ್ಟು ಸೇರಿಸಿ ಕೇಳುವ, ಸ್ವೀಕರಲ್ಲಿ ಕೇಳಿ ಎಲ್.ಹೆಚ್‌ನ ಕಂಬಗಳನ್ನು ಒಡೆಯುವ. ದೇವರಿಗೆ ಸರಿಯಾಗಿ ಸತ್ಯ ಸಂಗತಿ ಹೇಳಿ, ನಾನು ತಪ್ಪು ಮಾಡಿದ್ದರೆ ನನಗೆ ಪ್ರಾಯಶ್ಚಿತ ದೊರೆಯಲಿ, ಹರೀಶ್ ಪೂಂಜ ತಪ್ಪು ಮಾಡಿದ್ದರೆ ಅವರಿಗೆ ಪ್ರಾಯಶ್ಚಿತ ದೊರೆಯಲಿ ಎಂದು ಬಂಗೇರ ತಿಳಿಸಿದರು.
ಬೌನ್ಸರ್‌ಗಳ ಶೋಕೆ ನಿಮಗಿದೆ:
ನಿಮಗೆ ಬೌನ್ಸರ್‌ಗಳ ಶೋಕೆ ಇದೆ ಎಂದು ನಿಮ್ಮದೇ ಕಾರ್ಯಕರ್ತರು ಹೇಳುತ್ತಿದ್ದಾರೆ. ಸಕಲೇಶಪುರ ದಾಟಿದ ನಂತರ ನೀವು ಜನವೇ ಬೇರೆ ಎನ್ನುತ್ತಾರೆ. ನೀವು ಮೂರು ಜನ ಬೌನ್ಸರ್‌ಗಳನ್ನು ಹಿಡಿದುಕೊಂಡು ಬೆಂಗಳೂರು ಸುತ್ತಾಡುತ್ತಿದ್ದೀರಿ. ಗಂಗಾಧರ ಗೌಡರ ಜೊತೆ ಊಟಕ್ಕೆ ಹೋದ ಸಂದರ್ಭದಲ್ಲಿ ನಾನು ಅವರನ್ನು ನೋಡಿದ್ದೇನೆ ಎಂದು ಬಂಗೇರ ಆರೋಪಿಸಿದರು.
ಸೌಜನ್ಯ ಪ್ರಕರಣ ನಡೆದಾಗ ನಾನು ಶಾಸಕನಾಗಿದ್ದೆ. ಆಗ ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದರು. ಸಿಬಿಐ ತನಿಖೆಗೆ ಒತ್ತಾಯಿಸಿದ್ದೆ ನಾನು. ಹರೀಶ್ ಪೂಂಜ ಹಾಗೂ ಪ್ರತಾಪಸಿಂಹ ನಾಯಕ್ ಐದು ವರ್ಷಗಳಲ್ಲಿ ಒಮ್ಮೆಯೂ ಇದರ ಬಗ್ಗೆ ಪ್ರಶ್ನೆ ಕೇಳಿಲ್ಲ ಎಂದ ಬಂಗೇರರು, ಅಂಡಿಂಜೆ ಸುಜಾತ ಹಂತಕರು ನನ್ನ ಜೊತೆ ಇಲ್ಲ, ಅವರ ಅಣ್ಣ ನನ್ನ ಜೊತೆ ಇದ್ದಾರೆ. ವನಜ ಕೊಲೆ ಕೇಸು ಆಗಿ, ಆರೋಪಿಗಳಿಗೆ ಜೈಲು ಆಗಿತ್ತು. ಅವರಿಬ್ಬರಿಗೆ ನಾನು ಅನ್ಯಾಯ ಮಾಡಿದ್ದರೆ ಅವರ ಅಣ್ಣಂದಿರು ನನ್ನ ಜೊತೆ ಇರುತ್ತಾರಾ ಎಂದರು.
ಸುನಂದ ನನ್ನ ಮನೆಯಲ್ಲಿ ಕೆಲಸಕ್ಕಿದವರು. ಅವರ ಮರ್ಡರ್ ಆಗಿತ್ತು ಎಂದು ಪೂಂಜರು ಹೇಳಿದ್ದಾರೆ. ಆದರೆ ಅವರು ಫಿಡ್ಸ್ ಕಾಯಿಲೆಯಿಂದ ಮೃತಪಟ್ಟಿರುವುದು. ಇದು ವೈದ್ಯಕೀಯ ವರದಿಯಲ್ಲಿಯಲ್ಲಿ ಕೂಡಾ ಇದೆ. ನಂತರ ಸಿಒಡಿ ತನಿಖೆ ಕೂಡಾ ನಡೆದು ಆದಿನ ನಮ್ಮ ಮನೆಯಲ್ಲಿ ನಡೆದ ಗುರುವಾಯನಕೆರೆ ಸೊಸೈಟಿಯ 11 ಮಂದಿ ಸದಸ್ಯರು, ಕಾರ್ಯದರ್ಶಿಯ ವಿಚಾರಣೆಯೂ ನಡೆದಿತ್ತು. ಹರೀಶ್ ಪೂಂಜರಿಗೆ ಈ ಎಲ್ಲಾ ವಿಷಯಗಳನ್ನು ಯಾರು ಹೇಳಿದರು ನಮ್ಮ ಜೊತೆ ಇದ್ದ ಮಗ ಹೇಳಿದ್ದಾ ಅಥವಾ ಅಪ್ಪ ಹೇಳಿದ್ದಾ ಎಂದು ಬಹಿರಂಗ ಪಡಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕ ಗಣೋಶೋತ್ಸವಕ್ಕೆ ರೂ.2 ಲಕ್ಷ ದೇಣಿಗೆ ಶಾಸಕರು ನೀಡಿದ್ದಾರೆ. ದುಡಿದ ಹಣವನ್ನು ಈ ರೀತಿ ನೀಡುತ್ತಾರೆಯೇ, ಇಷ್ಟು ಹಣ ಎಲ್ಲಿಂದ ಬಂತು. ಶಾಸಕ ಹರೀಶ್ ಪೂಂಜರವರು ರೂ.3500 ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಅವರು ಇದರ ಬಗ್ಗೆ ಮಂಜುರಾತಿ ಪತ್ರವನ್ನು ಸಾರ್ವಜನಿಕರ ಎದುರು ಇಡಬೇಕು, ಅವರ ಅವಧಿಯಲ್ಲಿ ನಮ್ಮ ಪಾರ್ಟಿಯ ತಾಪ, ಜಿಪ ಸದಸ್ಯರು, ಗ್ರಾ.ಪಂ ಅಧ್ಯಕ್ಷ, ಸದಸ್ಯರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನ ಮಾಡಿದ್ದಾರೆ. ಇದರ ಬಗ್ಗೆ ಸಚಿವರಾಗಿದ್ದ ಶ್ರೀನಿವಾಸ ಪೂಜಾರಿಯವರ ಗಮನಕ್ಕೂ ತಂದರೂ ಸರಿಪಡಿಸಲಿಲ್ಲ, ನನ್ನ ಜೊತೆ ಹಲವು ಮಂದಿ ವಕೀಲರಿದ್ದಾರೆ. ಪೊಟ್ಟು ವಕೀಲ ಎಂದು ಶಾಸಕರು ಯಾರನ್ನು ಹೇಳಿರುವುದು ಇದು ನನಗೆ ಮತ್ತು ಎಲ್ಲ ವಕೀಲರುಗಳಿಗೆ ನೋವು ತಂದಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ಪ್ರಮುಖರಾದ ಜಯವಿಕ್ರಮ್ ಕಲ್ಲಾಪು ಉಪಸ್ಥಿತರಿದ್ದರು.

Leave a Comment

error: Content is protected !!