ಬೆಳಾಲಿನಲ್ಲಿ ಎಸ್ ಡಿ ಎಂ ಎನ್ ಎಸ್ ಎಸ್ ಶಿಬಿರದ ಸಮಾರೋಪ

Suddi Udaya

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ, ಉಜಿರೆ ಶ್ರೀಧ ಮ ಪಾಲಿಟೆಕ್ನಿಕ್ ಕಾಲೇಜಿನ ಎನ್ ಎಸ್ ಎಸ್ ಶಿಬಿರದ ಸಮಾರೋಪ ಸಮಾರಂಭ ಜರಗಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀಧ ಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಎಸ್ ಸತೀಶ್ಚಂದ್ರರವರು ಮಾತನಾಡುತ್ತಾ ಶಿಕ್ಷಣಕ್ಕೆ ನಿಜವಾದ ಅರ್ಥ ಸಿಗುವುದೇ ಇಂತಹ ಜೀವನ ಶಿಕ್ಷಣ ನೀಡುವ ಶಿಬಿರಗಳಿಂದ. ತಂತ್ರಜ್ಞಾನ ಔದ್ಯೋಗಿಕ ನೆಲೆಯಲ್ಲಿದ್ದರೆ ಯಶಸ್ವೀ ಜೀವನಕ್ಕೆ ಜೀವನ ಮೌಲ್ಯಗಳು ಅಷ್ಟೇ ಪ್ರಾಮುಖ್ಯ. ಸಮುದಾಯದೊಂದಿಗೆ ಬದುಕಲು ಬೇಕಾಗುವ ಮೌಲ್ಯಗಳಾದ ಸಹಕಾರ ಹೊಂದಾಣಿಕೆ, ಪರೋಪಕಾರದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಉಜಿರೆ ಶ್ರೀಧ ಮ ಆಡಳಿತ ಮಂಡಳಿಯ ಶಿಕ್ಷಣ ಸಂಸ್ಥೆಗಳಿಂದ ಸದೃಢ ಸಮಾಜ ನಿರ್ಮಾಣ ಮಾಡುವ ದೊಡ್ಡ ಕೆಲಸ ನಡೆಯುತ್ತಿದೆ. ಶಿಬಿರವೂ ಅದರ ಒಂದು ಭಾಗವಾಗಿದೆ ಎನ್ನುತ್ತಾ ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡರವರು ಗ್ರಾಮದ ಪರವಾಗಿ ಉಜಿರೆ ಶ್ರೀ ಧ ಮ ಎಜ್ಯುಕೇಶನಲ್ ಸೊಸೈಟಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಗಣ್ಯರಾದ ಬೆಳಾಲು ತಿಮ್ಮಪ್ಪ ಗೌಡ, ಶ್ರೀ ಧ ಮ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಬಿ ಸೋಮಶೇಖರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದ ಕ ಜಿಲ್ಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರನ್ನು ಮತ್ತು ವಿಶೇಷ ರೀತಿಯಲ್ಲಿ ಶಿಬಿರದ ಯಶಸ್ಸಿಗೆ ಶ್ರಮ ನೀಡಿದ ಶಾಲಾ ಜವಾನರಾದ ಸುಂದರ್ ರವರನ್ನು ಈ ಸಂದರ್ಭದಲ್ಲಿ ಎನ್ ಎಸ್ ಎಸ್ ಪರವಾಗಿ ಸನ್ಮಾನಿಸಲಾಯಿತು. ಸಮಾರಂಭವು ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಏಳು ದಿನಗಳ ಶಿಬಿರದಲ್ಲಿ ಶ್ರಮದಾನ, ಕ್ಷೇತ್ರ ಭೇಟಿ, ಔದ್ಯೋಗಿಕ ಮಾಹಿತಿ , ಅಣಬೆ ಕೃಷಿ ಮಾಹಿತಿ, ಜಲಮರು ಪೂರಣದ ಇಂಗು ಗುಂಡಿ ನಿರ್ಮಾಣ, ಸ್ವಚ್ಚತಾ ಆಂದೋಲನ, ಕಾಷ್ಠಶಿಲ್ಪ ರಚನೆಯ ಕಾರ್ಯಾಗಾರ ಮುಂತಾದ ವೈವಿಧ್ಯಮಯ ಶೈಕ್ಷಣಿಕ ಕಾರ್ಯಕ್ರಮಗಳು ಆಯೋಜನೆಗೊಂಡಿತ್ತು. ಈ ಎಲ್ಲದರ ಮಾಹಿತಿ ನೀಡುತ್ತಾ ಶಿಬಿರದ ಸಂಯೋಜಕರಾದ ಪ್ರಕಾಶ್ ಗೌಡರವರು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಶಿಬಿರದ ನೆನಪಿಗಾಗಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಹಳೆ ವಿದ್ಯಾರ್ಥಿ ಸಂಘದವರು ಶಾಲೆಗೆ ಸ್ಟೀಲ್ ಭಾಷಣ ಪೀಠವನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಉಪಸಂಯೋಜನಾಧಿಕಾರಿಗಳು, ಊರಿನ ಜನತೆ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಶಿಬಿರದ ಯಶಸ್ಸಿಗಾಗಿ ಗ್ರಾಮ ಪಂಚಾಯತ್ ಬೆಳಾಲು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳಾಲು, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ , ಶಿಕ್ಷಕ ರಕ್ಷಕ ಸಂಘ, ಹಳೆವಿದ್ಯಾರ್ಥಿ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಗ್ರಾಮದ ಭಜನಾ ಮಂಡಳಿಗಳು, ಯೋಜನೆಯ ಒಕ್ಕೂಟಗಳು, ಮೈತ್ರಿ ಯುವಕ ಮಂಡಲ, ಸ್ವ ಸಹಾಯ ಸಂಘಗಳು ಹಾಗೂ ಸ್ಥಳೀಯ ಪ್ರಾಥಮಿಕ ಶಾಲೆಗಳೇ ಮೊದಲಾದ ಹದಿನೇಳು ಸಂಘ ಸಂಸ್ಥೆಗಳು ಸಹಕಾರ ನೀಡಿದ್ದವು. ಶಿಬಿರಾರ್ಥಿಗಳು ಕಾರ್ಯಕ್ರಮ ಸಂಯೋಜಿಸಿದರು.

Leave a Comment

error: Content is protected !!