ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮ

Suddi Udaya

ನಾರಾವಿ : ನಾರಾವಿಯ ಧರ್ಮಶ್ರೀ ಸಭಾಭವನದಲ್ಲಿ ಶಿಖರ್ಜಿಯಲ್ಲಿ ನಿರಂಜನನ ದರ್ಶನ ಹಾಗೂ ಜಿನಭಕ್ತಿ ಲಹರಿ ಕೃತಿ ಲೋಕಾರ್ಪಣಾ ಕಾರ್ಯಕ್ರಮವು ಅ. 23 ರಂದು ಜರಗಿತು.

ಒಂದು ಸಮುದಾಯದ ಒಳಗಿನ ವಿಚಾರಗಳ ಕುರಿತಾಗಿ ಪ್ರಕಟವಾಗುವ ಯಾವುದೇ ಪುಸ್ತಕಗಳು ಎಲ್ಲ ಸಮುದಾಯದವರಲ್ಲಿ ಕೊಡುಕೊಳ್ಳುವಿಕೆಗೆ ಒಳಗಾದಾಗವಷ್ಟೆ ಆ ಪುಸ್ತಕದ ಸಾರ್ಥಕತೆಯಾಗುತ್ತದೆ. ಒಂದು ಧರ್ಮ ಅಥವಾ ಸಮುದಾಯವನ್ನು ಮತ್ತೊಂದು ಧರ್ಮವು ಪರಸ್ಪರ ಅರ್ಥ ಮಾಡಿಕೊಳ್ಳಬೇಕಾದರೆ ಕೊಡುಕೊಳ್ಳುವಿಕೆಯ ಅಗತ್ಯವಿದೆ. ಧರ್ಮದ ಕುರಿತಾಗಲಿ, ಸಾಮಾಜಿಕ ವಿಷಯವೇ ಆಗಿರಲಿ ಪುಸ್ತಕ ರಚನೆಯು ಸುಲಭದ ಕೆಲಸವಲ್ಲ. ಅದ್ದರಿಂದ ಅನೇಕ ಬಗೆಯ ತಿದ್ದುಪಡಿಗಳ ಅಗತ್ಯ ಇವತ್ತಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ನಿರಂಜನ್ ಜೈನ್ ಕುದ್ಯಾಡಿಯವರು ದಿವ್ಯಾಂಗರಾಗಿದ್ದು ಅತಿ ಕಷ್ಟದಿಂದ ಪುಸ್ತಕ ಬರೆದಿರುವುದರ ಸಾಧನೆಯನ್ನು ಅಭಿನಂದಿಸುವುದೆಂದರೆ ನೀವೆಲ್ಲರೂ ಆ ಪುಸ್ತಕವನ್ನು ಬಹಳ ಶ್ರದ್ದೆಯಿಂದ ಓದಿ ಅವರಿಗೆ ಅಭಿಪ್ರಾಯ ತಿಳಿಸುವುದಾಗಿರುತ್ತದೆ ಎಂದು ಆಶೀರ್ವಚನ ಕಾರ್ಯಕ್ರಮ ನೆರವೇರಿಸಿದ ಜಗದ್ಗುರು ಪೂಜ್ಯ ಡಾ। ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ , ಜೈನಮಠ ಮೂಡುಬಿದಿರೆ ಅವರು ಹೇಳಿದರು.


ಕನ್ನಡ ಭಾಷಾ ಪಂಡಿತ ಬಿ. ಪಿ. ಸಂಪತ್ ಕುಮಾರ್ ಮೂಡುಬಿದಿರೆ ಅವರು ,ಬಿಡುಗಡೆಗೊಂಡ ಕೃತಿಯ ಪರಿಚಯ ಭಾಷಣ ಮಾಡಿದರು. ಲೇಖಕರು ತಮ್ಮ ಅತೀ ಬಡತನದ ಬಾಲ್ಯದ ದಿನಗಳನ್ನು ಯಾವುದೇ ಸಂಕೋಚವಿಲ್ಲದೆ ಪುಸ್ತಕದ ಮೊದಲ ಪುಟಗಳಲ್ಲಿ ಬರೆದುಕೊಂಡಿದ್ದಾರೆ. ಅವರು ತಮ್ಮ ಶಿಖರ್ಜಿ ಯಾತ್ರೆಯ ಅನುಭವಗಳನ್ನು ಬಹಳ ಚೆನ್ನಾಗಿ ನಿರೂಪಿಸಿದ್ದು ಒಬ್ಬ ಹಿರಿಯ ಅನುಭವೀ ಬರಹಗಾರನಂತೆ ಓದುಗರಿಗೆ ಕಾಣುತ್ತಾರೆ. ಅವರು ರಚಿಸಿರುವ ಸುಮಾರು ಐವತ್ತರಷ್ಟು ಜಿನ ಭಕ್ತಿ ಗೀತೆಯನ್ನು ಕೂಡಾ ಈ ಪುಸ್ತಕದಲ್ಲಿ ಮುದ್ರಿಸಲಾಗಿದ್ದು ಧರ್ಮೀಯರಿಗೆ ಅತೀ ಆಪ್ತವಾಗಿರುವಂತೆ ರಚನೆಯಾಗಿದೆ ಎಂದು ಕೃತಿ ಪರಿಚಯ ಮಾಡಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಜೈನ್ ಮಿಲನ್‌ ಅದರ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿರುವ ಡಿ. ಸುರೇಂದ್ರ ಕುಮಾರ್ ಮತ್ತು ಅನಿತಾ ಸುರೇಂದ್ರ ಕುಮಾರ್ ಇಬ್ಬರೂ ಲೇಖಕ ನಿರಂಜನ್ ಜೈನ್ ಅವರಿಗೆ ಶುಭಾಶಂಸನೆಗೈದರು. ಮನುಷ್ಯ ಎಂದಿಗೂ ಅಶಾಶ್ವತನಾಗಿರುತ್ತಾನೆ ಆದರೆ, ಆತನು ಮಾಡಿದ ಸತ್ಕಾರ್ಯಗಳು ಶಾಶ್ವತವಾಗಿರುತ್ತದೆ. ಅದರಲ್ಲೂ ಪುಸ್ತಕ ಕೃತಿ ರಚನೆ ಮಾಡಿದರೆ ಲೇಖಕ ನಿತ್ಯವೂ ನಿರಂತರವೂ ಜನರ ಮನದಾಳದಲ್ಲಿ ಬದುಕಿರುತ್ತಾನೆ, ಆತ ಶಾಶ್ವತನಾಗಿದ್ದಂತೆಯೆ ಎಂದು ಡಿ. ಸುರೇಂದ್ರ ಕುಮಾರ್ ಜೈನ್ ಅವರು ತಮ್ಮ ಅರ್ಥಪೂರ್ಣ ಮಾತುಗಳಿಂದ ಲೇಖಕರಿಗೆ ಶುಭ ಹಾರೈಸಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ , ಪುಸ್ತಕದ ಪ್ರಕಾಶಕರೂ ಆಗಿರುವ ಬೆಂಗಳೂರಿನ ರತ್ನತ್ರಯ ಕ್ರಿಯೇಷನ್ಸ್ ಅದರ ಮುಖ್ಯಸ್ಥೆ ಡಾ।ನೀರಜಾ ನಾಗೇಂದ್ರ ಕುಮಾರ್ ಮಾತಾನ್ನಾಡುತ್ತ, ಈ ಕೃತಿಯಲ್ಲಿ ತುಳುನಾಡಿನ ಭಾಷೆಯ ಸೊಗಡು, ಅಲ್ಲಿನ ಜೀವನಾದರ್ಶಗಳ ದರ್ಶನ ಓದುಗರಿಗೆ ಲಭಿಸುತ್ತದೆ. ಈ ಕೃತಿಯನ್ನು ಓದಿದವರಿಗೆ ಶಿಖರ್ಜಿಯ ದರ್ಶನ ಮಾಡಲೇಬೇಕೆನ್ನುವಷ್ಟು ಭಕ್ತಿ ಭಾವ ಹುಟ್ಟುತ್ತದೆ. ಅವರು ತಮ್ಮ ದರ್ಶನ ಯಾತ್ರೆಯನ್ನು ಆ ರೀತಿ ತೆರೆದಿಟ್ಟು ವಿವರಿಸಿದ್ದಾರೆ. ಈ ಕೃತಿಯು ಜಿನ ಧರ್ಮೀಯರಿಗೆ ಅತ್ಯಂತ ಪುಣ್ಯ ಪ್ರಸಾದ ರೂಪವಾಗಿದೆ ಅನ್ನುವುದರಲ್ಲಿ ಬೇರೆ ಮಾತಿಲ್ಲ ಎಂದು ಹೇಳಿದರು.


ಕಾರ್ಯಕ್ರಮದ ಆಯೋಜಕರ ಪರವಾಗಿ ಶ್ವೇತ ಕೆ,ನ್ಯಾಯವಾದಿ ಮೂಡುಬಿದಿರೆ ಅವರು ಕೃತಿಕಾರ ನಿರಂಜನ ಜೈನ್ ಕುದ್ಯಾಡಿ ಅವರ ಸಂಪೂರ್ಣ ಪರಿಚಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಲೇಖಕರಿಗೆ ಸಮ್ಮಾನ ಗೌರವವನ್ನು ನೀಡಲಾಯಿತು. ನಿರಂಜನ ಜೈನ್ ಕುದ್ಯಾಡಿ ಅವರು ಅಭಿವಂದನಾ ಭಾಷಣದಲ್ಲಿ ತನಗೆ ಎಲ್ಲ ರೀತಿಯಿಂದ ಸಹಕರಿಸಿದ ಪ್ರತಿಯೊಬ್ಬರಿಗೂ ತಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.


ಖ್ಯಾತ ಗಾಯಕಿ ನಿರೀಕ್ಷಾ ಸನತ್ ಕುಮಾರ್ ಅವರು ನಿರಂಜನ್ ಜೈನ್ ರಚಿಸಿದ್ದ ಒಂದು ಭಕ್ತಿ ಹಾಡನ್ನು ರಾಗ ಸಂಯೋಜಿಸಿ ಹಾಡಿದರು.


ಮಾಲತಿ ವಸಂತರಾಜ್, ನಾಗೇಂದ್ರ ಕುಮಾರ್ ಬೆಂಗಳೂರು, ನಿರಂಜನ್ ಜೈನ್ ರಾಮೇರಗುತ್ತು ಅಧ್ಯಕ್ಷರು ನಾರಾವಿ ಜೈನ ದಿಗಂಬರ ಬಸದಿ, ರಾಜವರ್ಮ ಜೈನ್ ಅಧ್ಯಕ್ಷರು ನಾರಾವಿ ಗ್ರಾಮ ಪಂಚಾಯತ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಅಶೋಕ್ ಕುಮಾರ್ ಜೈನ್, ಜೈನ ಯುವಜನ ಸಂಘ ನಾರಾವಿ ಇದರ ಅಧ್ಯಕ್ಷ ಜಿನೇಂದ್ರ ಜೈನ್ , ನವೀನ್ ಪ್ರಸಾದ್ ಜಾಂಬ್ಳೆ, ನಥ್ಮಲ್ ಜಿ ರಾಜಸ್ಥಾನ , ಲೇಖಕರ ತಾಯಿ ಪುಷ್ಪಾವತಿ , ಲೇಖಕ ನಿರಂಜನ ಜೈನ್ ಕುದ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಆಯೋಜಕರಾಗಿ ವಸಂತ್ ಕುಮಾರ್ ಬಂಗ ಕಾರ್ಕಳ, ಉದ್ಯಮಿ ಸನತ್ ಕುಮಾರ್ ಹೊಸ್ಮಾರ್, ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಸಂಚಾಲಕಿ ಶಶಿಕಲಾ ಕೆ ಹೆಗ್ಡೆ, ನ್ಯಾಯವಾದಿ ಶ್ವೇತಾ ಜೈನ್ ಮೂಡುಬಿದಿರೆ ಕಾರ್ಯನಿರ್ವಹಿಸಿದರು. ಅಧ್ಯಾಪಕ ಧರಣೇಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು. ಲೇಖನ್ ಜೈನ್ ಪ್ರಾರ್ಥನೆ ಹಾಡಿದರು.

Leave a Comment

error: Content is protected !!