ಬೆಳ್ತಂಗಡಿ: ಅರಣ್ಯ ಒತ್ತುವರಿ ಮತ್ತು ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಇರುವ ಅರಣ್ಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂಬ ಆದೇಶವಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ತಿಳಿಸಿದರು.
ಅವರು ಅ.30ರಂದು ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪಾರಂಪಾರಿಕ ಅರಣ್ಯವಾಸಿಗಳು ಹಲವಾರು ತಲೆಮಾರುಗಳಿಂದ ಈ ಪ್ರದೇಶದಲ್ಲಿ ವಾಸಿಸುವಂತಹ ಎಲ್ಲರ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ನೀಡುವ ದೃಷ್ಟಿಯಲ್ಲಿ ಎಲ್ಲ ಒತ್ತುವರಿಗಳ ಬಗ್ಗೆ ಸರಕಾರ ಪುನರ್ ಪರಿಶೀಲನೆ ಮಾಡಬೇಕೆಂದು ತಿಳಿಸಿದರು.
ಅರಣ್ಯ ಒತ್ತುವರಿದಾರರನ್ನು ತೆರವುಗೊಳಿಸುವ ಸಂಬಂಧ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 ರ ಮತ್ತು ನಿಯಮಗಳು 2008 ರ ಕಲಂ 5 ರನ್ವಯ ಯಾರೇ ಅರಣ್ಯವಾಸಿ ಅನುಸೂಚಿತ ಬುಡಕಟ್ಟಿನ ವ್ಯಕ್ತಿಯು ಅಥವಾ ಇತರೆ ಪಾರಂಪರಿಕ ಅರಣ್ಯ ವಾಸಿಗಳು ಅರ್ಜಿ ಹಾಕಿದಲ್ಲಿ ಪರಿಶೀಲನಾ ಪೂರ್ಣವಾಗುವವರೆಗೆ ಅಧಿಯೋಗದಲ್ಲಿರುವ ಅರಣ್ಯ ಜಮೀನಿನಿಂದ ಅವರನ್ನು ಒಕ್ಕಲೆಬ್ಬಿಸಬಾರದು ಹಾಗೂ ಮೂರು ಎಕರೆಗಿಂತ ಕಡಿಮೆ ಇರುವ (ಒತ್ತುವರಿ ಭೂಮಿ ಮತ್ತು ಆತನ ಪಟ್ಟಾ ಭೂಮಿ ಸೇರಿ) ಅರ್ಹ ಪ್ರಕರಣಗಳನ್ನು ಅರಣ್ಯ (ಸಂರಕ್ಷಣಾ) ಕಾಯ್ದೆ 1980 ರಡಿಯಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಸರಕಾರವು ಆದೇಶಿಸಿದೆ ಎಂದು ತಿಳಿಸಿದರು.
ಒಂದು ವೇಳೆ ಅರಣ್ಯ ಭೂಮಿಯಲ್ಲಿ ಇದ್ದರೆ ಅಂತಹ ಒತ್ತುವಾರಿದಾರರಿಗೆ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಗಳ ಪ್ಯಾಕೇಜ್ ಕಲ್ಪಿಸುವ ಬಗ್ಗೆ ಸರಕಾರದ ಹಂತದಲ್ಲಿ ಪರಿಶೀಲಿಸಲಾಗುವುದು.
ಪಾರಂಪಾರಿಕವಾಗಿ ತಲೆಮಾರುಗಳಿಂದ ಈ ಪ್ರದೇಶದಲ್ಲಿ ವಾಸಿಸುವಂತಹ ವ್ಯಕ್ತಿಗಳಿಗೆ ಹಕ್ಕುಪತ್ರ ಕೊಡುವ ದೃಷ್ಟಿಯಲ್ಲಿ ಅವರಿಗೆ ಶಾಶ್ವತವಾದಂತಹ ಪರಿಹಾರ ಕೊಡುವ ದೃಷ್ಟಿಯಲ್ಲಿ ಸರಕಾರ ಕ್ರಮವಹಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ ಸರ್ಕಾರವನ್ನು
ಒತ್ತಾಯಿಸುತ್ತದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು.