ಧಮ೯ಸ್ಥಳಕ್ಕೆ ಧಮ೯ ಸಂರಕ್ಷಣಾ ಪಾದಯಾತ್ರೆ: ಧರ್ಮಪ್ರವಾಹದಲ್ಲಿ ಮಿಂದೆದ್ದ ಜನಸಾಗರ

Suddi Udaya

ಶತಮಾನಗಳಿಗೊಮ್ಮೆ ಈ ಭೂಮಿಯಲ್ಲಿ ಅದ್ಭುತಗಳು ನಡೆಯುತ್ತವೆ. ಧರ್ಮಸ್ಥಳ ಕ್ಷೇತ್ರವೂ ಕೂಡ ಅನೇಕ ಪವಾಡಗಳಿಗೆ ಸಾಕ್ಷಿಯಾಗಿದೆ. ಪ್ರಾರಂಭವೇ ದಾನ ಪರಂಪರೆಗೆ ಮನಸೋತ ಧರ್ಮದೇವತೆಗಳು ನೆಲೆನಿಂತು ಕುಡುಮಪುರವನ್ನು ಧರ್ಮಸ್ಥಳವನ್ನಾಗಿಸಿದರು.

ತದನಂತರ ಧರ್ಮಸ್ಥಳ ಕ್ಷೇತ್ರ ಅನೇಕ ಪವಾಡಗಳಿಗೆ, ಅತಿಶಯಗಳಿಗೆ, ಐತಿಹಾಸಿಕತೆಗೆ ಸಾಕ್ಷಿಯಾಗಿತ್ತು. ಚತುರ್ವಿಧ ದಾನಗಳ ಮೂಲಕ ಧರ್ಮಸ್ಥಳ ಜಗತ್ತಿನ ಕಣ್ಮಣಿಯಾಗಿದೆ. ಹೆಗ್ಗಡೆ ಪರಂಪರೆ ದಾನ ಧರ್ಮಗಳ ವಾರಸುದಾರನಾಗಿ ಭುವಿಯ ಸಂಸ್ಕೃತಿಯ ದ್ಯೋತಕವಾಗಿದೆ.

ನಿನ್ನೆ ನಡೆದ ಧರ್ಮಸಂರಕ್ಷಣಾ ಪಾದಯಾತ್ರೆ ಅಕ್ಷರಶಃ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಟನೆ. ಭೋರ್ಗರೆದು ಬಂದ ಧರ್ಮ ಸೈನಿಕರು ಲೋಕದ ಒಡೆಯನಿಗೆ ಶರಣೆಂದರು.‌ ತದನಂತರ ಧರ್ಮದೊಡೆಯನ ಮಾತುಗಳಿಗೆ ಕಿವಿಯಾಗಿ ಧರ್ಮ ಸಂರಕ್ಷಣೆಯ ಸಂಕಲ್ಪಗೈದರು.

ಉಜಿರೆಯಿಂದ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಧರ್ಮ ಸೈನಿಕರ ಭಾವೋದ್ವೇಗದ ಕಟ್ಟೆ ಒಡೆಯಿತು. ಅಣೆಕಟ್ಟಿನ ಎಲ್ಲಾ ಬಾಗಿಲನ್ನು ಒಮ್ಮೆಲೇ ತೆರೆದಾಗ ಧರ್ಮ ಪ್ರವಾಹ ಧರ್ಮಸ್ಥಳದ ಕಡೆಗೆ ನಾಗಾಲೋಟದಿಂದ ಹರಿಯಿತು. ಅಧರ್ಮದ ಕಿಚ್ಚು ಧಗಧಗನೇ ಉರಿಯುತ್ತಿತ್ತು. ಆದರೂ ಬಿಸಿಲ ಉರಿಯ ಲೆಕ್ಕಿಸದೇ ಧರ್ಮಯಾತ್ರೆಯ ಕಲರವ ಹರಹರ ಮಹಾದೇವ ಎಂಬ ಘೋಷವಾಕ್ಯದೊಡನೆ ಮುಂದುವರೆಯಿತು.

ನಾಕ ಲೋಕದಿ ದೇವತೆಗಳು ಒಟ್ಟು ಸೇರಿ ವರುಣ ದೇವನಿಗೆ ತಂಪನೆರೆಯಲು ಸೂಚಿಸಲಾಯಿತು. ನಾಡೆಲ್ಲಾ ಧೋ ಎಂದು ಸುರಿದ ಮಳೆರಾಯ ಕೊಳೆಯ ತೊಳೆದು ಶುಭ್ರಪಥವ ನಿರ್ಮಾಣ ಮಾಡಿದನು. ಪುಳಕಗೊಂಡ ಜನಸಾಗರ ಸಾಗರವ ಸೇರುವ ತವಕದಲಿ ಬಿರು ನಡಿಗೆಗೆ ಅನುವಾದರು. ಚಿಕ್ಕ ಚಿಕ್ಕ ಮಕ್ಕಳು, ಹೆಂಗಳೆಯರು, ಗಟ್ಟಿ ರಟ್ಟೆಯ ತರುಣರು, ಊರುಗೋಲು ಹಿಡಿದ ವೃದ್ಧರು, ಅನುಭವಿಗಳು, ಮೇಧಾವಿಗಳು, ಪ್ರಾಜ್ಞರು ಶಪಥಗೈದು ಮುನ್ನಡೆದರು.

ಲಕ್ಷ ಲಕ್ಷ ಸಂಖ್ಯೆ ಜನರ ಗಮ್ಯ ಒಂದೇ ಆಗಿತ್ತು. ಧರ್ಮ ಸಂರಕ್ಷಣೆ ಮತ್ತು ಧರ್ಮದೊಡೆಯನ ಮಾತಿಗೆ ಕಿವಿಯಾಗುವುದು. ಶ್ವೇತ ವಸ್ತ್ರಧಾರಿಯಾಗಿ ವೇದಿಕೆಗೆ ಬಂದು ಸಕಲ ಸ್ವಾಮೀಜಿಗಳಿಗೆ ವಂದಿಸಿ ಹೆಗ್ಗಡೆಯವರು ಅಮೃತ ಸಿಂಚನಗೈದರು. ಧರ್ಮ ಸಂರಕ್ಷಣೆಯಾಗದ ಹೊರತು ಈ ಜಗಕೆ ಅಸ್ತಿತ್ವವಿಲ್ಲ. ಸಂಸ್ಕೃತಿ ನಾಶವಾದರೆ ಧರ್ಮ ಸಾಮ್ರಾಜ್ಯದ ಪತನವಾಗುತ್ತದೆ. ನಿಮ್ಮ ಆಜ್ಞೆಯಲ್ಲಿರುವ ಈ ಹೆಗ್ಗಡೆಯೂ ಕೂಡ ಧರ್ಮ ಸಂರಕ್ಷಣೆಯ ಧರ್ಮ ಸೈನಿಕನೇ ಆಗಿರುತ್ತಾನೆ. ಈ ಸೈನಿಕನು ಈ ಕ್ಷೇತ್ರದ ಸಂಸ್ಕೃತಿಯ ಉಳಿವಿಗಾಗಿ ನಿಮ್ಮೊಡನೆ ಹೋರಾಡುತ್ತಾನೆ.‌ ಮನ – ವಚನ – ಕಾಯಗಳಿಂದ ಸಂಯಮದಲ್ಲಿ ಇರಬೇಕಾದದ್ದು ಈ ಹೆಗ್ಗಡೆಯ ಧರ್ಮವಾಗಿದೆ ಹಾಗೂ ಚತುರ್ವಿಧ ದಾನಗಳು ಮತ್ತಷ್ಟೂ ವೇಗವನ್ನು ಪಡೆದುಕೊಳ್ಳಲಿದೆ ಎಂದು ನುಡಿಯ ನುಡಿದಾಗ ಜನಸ್ತೋಮ ಪ್ರಚಂಡ ಕರತಾಡನಗೈದು ಅನುಮೋದನೆ ನೀಡಿತು.

ಸಂಜೆಯ ಹೊತ್ತು ಸೂರ್ಯ ಮುಳುಗಿದಾಗ ಹೊಟ್ಟೆಯು ತಾಳ ಹಾಕಿದ ಸಂದರ್ಭ ಧರ್ಮಸ್ಥಳದ ಅನ್ನಪೂರ್ಣೆ ಲಕ್ಷಾಂತರ ಜನಸಾಗರವನ್ನು ಕೈಬೀಸಿ ಪ್ರೇಮದಿ ಬರಮಾಡಿಕೊಂಡು ಸತ್ಕರಿಸಿದಳು.

ಹಿಂತಿರುಗಿದ ಜನಸಾಗರಕ್ಕೆ ಭಗವಾನ್ ಚಂದ್ರನಾಥ, ಮಂಜುನಾಥ , ಅಣ್ಣಪ್ಪ ಹರಸಿ ಬೀಳ್ಕೊಟ್ಟರು. ಬೆಟ್ಟದಲ್ಲಿ ಭಗವಾನ್ ಬಾಹುಬಲಿ ತ್ಯಾಗ , ಶಾಂತಿ , ಅಹಿಂಸೆಯ ಕಿರಣ ಸೂಸಿ ಬೆಳಕು ಸೂಸುತ್ತಿದ್ದನು.

ಬರಹ …….

#ನಿರಂಜನ್ ಜೈ ನ್ ಕುದ್ಯಾಡಿ

Leave a Comment

error: Content is protected !!