ಬೆಳ್ತಂಗಡಿ : ಬೆಳಾಲು ಗ್ರಾಮದ ಮಾಚಾರು ಕೆಂಪನೊಟ್ಟು ಎಂಬಲ್ಲಿ ವಿವಾಹಿತ ಮಹಿಳೆಯೋವ೯ರ ಶವಶುಕ್ರವಾರ ಬೆಳಗ್ಗೆ ಬಾವಿಯಲ್ಲಿ ಪತ್ತೆಯಾಗಿದ್ದು, ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಬೆಳಾಲು ಗ್ರಾಮದ ಕೆಂಪನೊಟ್ಟು ಜ್ಯೋತಿನಗರದ ವಿವಾಹಿತ ಮಹಿಳೆ ಶಶಿಕಲಾ ನಾಯ್ಕ (25ವ) ಎಂಬವರು ಸಂಶಯಾಸ್ಪದವಾಗಿ ಸಾವನ್ನಪ್ಪಿದವರು. ಕೆಂಪನೊಟ್ಟು ಎಂಬಲ್ಲಿ ತೋಟವೊಂದರ ಮನೆಯಲ್ಲಿ ಪತಿ ಪತ್ನಿ ಏಕೈಕ ಮಗಳ ಜೊತೆಕೆಲಸ ಮಾಡಿಕೊಂಡಿದ್ದು ಅಲ್ಲೇ ವಾಸ್ತವ್ಯವಿದ್ದರು. ಗುರುವಾರ ರಾತ್ರಿ ದಂಪತಿ ಮಾತ್ರ ಮನೆಯಲ್ಲಿ ಇದ್ದರೆನ್ನಲಾಗಿದೆ.
ಬೆಳಗ್ಗೆ ಪತಿ ಸುಧಾಕರ ನಾಯ್ಕ ಅವರು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗಿದ್ದು ವಾಪಾಸು ಬಂದವರೇ ತನ್ನ ಪತ್ನಿಯ ಶವ ಬಾವಿಯಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರ ಹೊರಗೆ ಗೊತ್ತಾಗುತ್ತಿರುವಂತೆಯೇ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಆಕೆಯೇ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಇನ್ನೇನಾದರೂ ನಡೆದಿದೆಯೇ ಎಂಬ ಬಗ್ಗೆ ಅನುಮಾನವೂ ವ್ಯಕ್ತವಾಗಿದೆ.
ಸ್ಥಳಕ್ಕೆ ಬಂಟ್ವಾಳ ಡಿವೈಎಸ್‌ಪಿ, ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸೆಕ್ಟರ್ ಅನಿಲ್ ಕುಮಾರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಕಾರ್ಯಕರ್ತರು ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಪೊಲೀಸರಿಗೆ ನೆರವಾದರು. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್.ಎಸ್.ಎಲ್) ಅಧಿಕಾರಿಗಳು ಭೇಟಿ ನೀಡಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಿದ್ದಾರೆ.