ಬೆಳ್ತಂಗಡಿ: ಸುವರ್ಣ ಮಹೋತ್ಸವ ವರ್ಷದಲ್ಲಿರುವ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಬಗ್ಗೆ ನಾವು ಮಾತನಾಡುವ ಮುನ್ನ ಅವರ ಸೇವೆಯೇ ಲಯನ್ಸ್ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ. ನನ್ನ ಅಧಿಕೃತ ಭೇಟಿಯ ದಿನ ಈ ಕ್ಲಬ್ ನೀಡಿದ ಅರ್ಹರಿಗೆ 4 ಮನೆ, 3 ಪ್ರಯಾಣಿಕರ ತಂಗುದಾಣ, ಸೇವಾ ಸದನ ಶಿಲಾನ್ಯಾಸ ಸೇರಿದಂತೆ 50 ಸೇವಾ ಚಟುವಟಿಕೆಗಳ ಮೂಲಕ ಲಯನ್ಸ್ ಸೇವೆ ಜನರ ಹೃದಯ ಮುಟ್ಟಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜ ಹೇಳಿದರು.
ನ.4 ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಅಧಿಕೃತ ಭೇಟಿ ನೀಡಿದ ಅವರು ಇಡೀ ದಿನದ ಸೇವಾ ಚಟುವಟಿಕೆಯಲ್ಲಿ ಭಾಗಿಯಾಗಿ ಸಂಜೆಯ ಸಾರ್ವಜನಿಕ ಅಧಿವೇಶನದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಮಾತನಾಡಿ, ಎಲ್ಲ ಸದಸ್ಯರ ಸಂಯುಕ್ತ ಸಹಕಾರದಿಂದ ಸೇವಾ ಪರ್ವ ಮುನ್ನಡೆಯುತ್ತಿದೆ. ಸಂಘಟನಾತ್ಮಕ ಪ್ರಯತ್ನವೇ ನಮ್ಮ ಯಶಸ್ಸಿಗೆ ಮುನ್ನುಡಿ ಎಂದರು.
ಜಿಲ್ಲಾ ಲಿಯೋ ವಿಭಾಗದ ಅಧ್ಯಕ್ಷೆ ಡಾ. ರಂಜಿತಾ ಶೆಟ್ಟಿ ಮಾತನಾಡಿ, ಸುವರ್ಣ ಮಹೋತ್ಸವ ವರ್ಷದ ಸಂಭ್ರಮ ಮತ್ತು ಸೇವಾ ಚಟುವಟಿಕೆ ಜೊತೆಗೆ ಬೆಳ್ತಂಗಡಿಯಿಂದ ಹೊಸದಾಗಿ ಲಿಯೋ ಕ್ಲಬ್ ಕೂಡ ಸೇರ್ಪಡೆಯಾಗಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಾಲ್ಡ್ ಡಿಸೋಜಾ, ಕೋಶಾಧಿಕಾರಿ ಸುಧಾಕರ ಶೆಟ್ಟಿ, ಪ್ರಾಂತ್ಯಾಧ್ಯಕ್ಷ ಹೆರಾಲ್ಡ್ ತಾವ್ರೋ, ವಲಯಾಧ್ಯಕ್ಷರಾದ ಎಂ.ಕೆ ದಿನೇಶ್, ಪ್ರತಿಭಾ ಹೆಬ್ಬಾರ್, ಪ್ರಾಂತ್ಯದ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು, ಬೆಳ್ತಂಗಡಿ ನಿಕಟಪೂರ್ವ ಅಧ್ಯಕ್ಷ ಡಾ. ದೇವಿ ಪ್ರಸಾದ್ ಉಪಸ್ಥಿತರಿದ್ದರು.
ರಾಜು ಶೆಟ್ಟಿ ವೇದಿಕೆಗೆ ಆಹ್ವಾನಿಸಿದರು. ಪ್ರಾಪ್ತಿ ಶೆಟ್ಟಿ ಪ್ರಾರ್ಥಿಸಿದರು. ಪುರುಷೋತ್ತಮ ಶೆಟ್ಟಿ ನೀತಿ ಸಂಹಿತೆ, ಗೋಪಾಲಕೃಷ್ಣ ಭಟ್ ಕಾಂಚೋಡು ಧ್ವಜವಂದನೆ ನಡೆಸಿದರು.
ಸ್ಥಾಪಕ ದಿನಾಚರಣೆ ಪ್ರಯುಕ್ತ ಸ್ಥಾಪಕ ಸದಸ್ಯರಾದ ಎಂ.ಜಿ ಶೆಟ್ಟಿ ಮತ್ತು ವಿ.ಆರ್ ನಾಯ್ಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಅನಂತಕೃಷ್ಣ ವರದಿ ಮಂಡಿಸಿದರು. ಧರಣೇಂದ್ರ ಕೆ ಜೈನ್ ನಿರೂಪಿಸಿದರು. ವಸಂತ ಶೆಟ್ಟಿ ರಾಜ್ಯಪಾಲರನ್ನು ಪರಿಚಯಿಸಿದರು.
ಕ್ಲಬ್ ಬುಲೆಟಿನ್ ಸಂಪಾದಕ ಕೃಷ್ಣ ಆಚಾರ್, ಜಯರಾಮ ಭಂಡಾರಿ, ದತ್ತಾತ್ರೇಯ ಜಿ, ಹೇಮಂತ ರಾವ್, ಮಂಜುನಾಥ ಜಿ, ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಹೊಸ ಸದಸ್ಯರ ಸೇರ್ಪಡೆ, ಸನ್ಮಾನ, ಗುರುತಿಸುವಿಕೆ ಪ್ರಕ್ರಿಯೆಗಳು ನಡೆದವು. ಸಹಭೋಜನ, ಸಮಾರಂಭಕ್ಕೂ ಮುನ್ನ ರಾಜ್ಯಪಾಲರನ್ನು ಅಯ್ಯಪ್ಪ ದೇವಸ್ಥಾನದ ಬಳಿಯಿಂದ ಸಭಾಂಗಣಕ್ಕೆ ಮೆರವಣಿಗೆ ಮೂಲಕ ತೆರೆದ ವಾಹನದಲ್ಲಿ ಕರೆತರಲಾಯಿತು. ಕೋಶಾಧಿಕಾರಿ ಶುಭಾಷಿಣಿ ವಂದಿಸಿದರು.