ಬೆಳ್ತಂಗಡಿ : ಸೌಜನ್ಯಾ, ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಯನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಈಗ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ವಿಚಾರಣ ನ್ಯಾಯಾಲಯ ತೀರ್ಪು ನೀಡಿದ 4 ತಿಂಗಳ ಬಳಿಕ ಮೇಲ್ಮನವಿ ಸಲ್ಲಿಸಲಾಗಿದೆ.
ಪ್ರಕರಣದ ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ 2023ರ ಜೂನ್ 16ರಂದು ತೀರ್ಪು ನೀಡಿತ್ತು. ಮೇಲ್ಮನವಿ ಸಲ್ಲಿಸಲು ಸಿಬಿಐಗೆ 60 ದಿನಗಳ ಕಾಲಾವಕಾಶ ಸಹ ನೀಡಲಾಗಿತ್ತು. ಆದರೆ 4 ತಿಂಗಳ ಬಳಿಕ ಸಿಬಿಐ ಮೇಲ್ಮನವಿ ಸಲ್ಲಿಸಿದೆ. 2012ರ ಅಕ್ಟೋಬರ್ 12ರಂದು ಸೌಜನ್ಯಾ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಸಂತೋಷ್ ರಾವ್‌ನನ್ನು ಬಂಧಿಸಿದ್ದರು. ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ 11 ವರ್ಷಗಳ ಬಳಿಕ ಆರೋಪಿ ನಿರ್ದೋಷಿ ಎಂದು ವಿಚಾರಣ ನ್ಯಾಯಾಲಯ ತೀರ್ಪು ನೀಡಿತ್ತು. ಈ ಮಧ್ಯೆ ಪ್ರಕರಣದ ಮರು ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.