ಬೆಳ್ತಂಗಡಿ: ಡಿಸೆಂಬರ್ 17ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕಿನ 18ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ.ಎ. ಕೃಷ್ಣಪ್ಪ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ
ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ ಅವರು ಪ್ರಕಟಿಸಿದ್ದಾರೆ
ಕಡಬ ತಾಲೂಕಿನ ಅಲಂಕಾರು ಎಂ. ತಿಮ್ಮಪ್ಪ ಪೂಜಾರಿ ಮತ್ತು ಶ್ರೀಮತಿ ಮುತ್ತಕ್ಕ ಅವರ ಮಗನಾಗಿರುವ ಕೃಷ್ಣಪ್ಪ ಪೂಜಾರಿಯವರು ಹಿರಿಯರ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ದೀರ್ಘಾವಧಿಯ ದುಡಿಮೆಯಲ್ಲಿ ಅಪಾರ ಶಿಷ್ಯ ವರ್ಗವನ್ನು ಪಡೆದು ವಿದ್ಯಾರ್ಥಿಗಳ ಮನದಲ್ಲಿ ಚಿರಸ್ಥಾಯಿಯಾದವರು.
ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತರ ಪದವಿ ಹಾಗೂ ಬಿ.ಇಡಿ ಪದವಿಯನ್ನು ಗಳಿಸಿರುವ ಇವರು 1966 ರಿಂದ 20೦6 ರವರೆಗೆ ಬೇರೆ ಬೇರೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಸರಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಬೆಳ್ತಂಗಡಿ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 13 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗೆ ಒಟ್ಟು 53 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.
ಶೈಕ್ಷಣಿಕ,ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟು ಸೇವೆ ಮಾಡಿದ ಇವರ ಸಾಧನೆಯನ್ನು ಗುರುತಿಸಿ ಬೇರೆ ಬೇರೆ ಸಂಘ- ಸಂಸ್ಥೆಗಳು ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದೆ.