ಗುರುವಾಯನಕೆರೆ: ದೇಶದ – ನಾಡಿನ ಸುಭದ್ರ ಭವಿಷ್ಯಕ್ಕಾಗಿ ದೂರದೃಷ್ಟಿ ಇರುವ ನಾಯಕರನ್ನು ಆರಿಸಿಕೊಳ್ಳಬೇಕು. ಇಂಥ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಚುನಾವಣೆಗೆ ವಿಶೇಷ ಮಹತ್ವವಿದೆ. ನಿಜವಾಗಿ ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ ಎಂದು ದ.ಕ ಜಿಲ್ಲಾ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಜಯಾನಂದ ಸುವರ್ಣ ಹೇಳಿದರು.
ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಚುನಾವಣಾ ಅರಿವು ಸ್ಪರ್ಧೆಗಳನ್ನು ಉದ್ಘಾಟಿಸಿ , ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್ ಮಾತನಾಡಿ ‘ ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ; ಮತದಾರರು. ಯಾವ ಪೂರ್ವಾಗ್ರಹ ಕ್ಕೂ ಒಳಗಾಗದೆ ಸೂಕ್ತ ನಾಯಕರನ್ನು ಆರಿಸುವ ಮೂಲಕ ಸುಭದ್ರ ದೇಶವನ್ನು ಕಟ್ಟುವ ಜವಾಬ್ದಾರಿ ಇಂದಿನ ಯುವ ಸಮೂಹದ ಮೇಲಿದೆ ‘ ಎಂದು ಹೇಳಿದರು.
ಜಿಲ್ಲಾ ಇ ಎಲ್ ಸಿ ಸಂಯೋಜಕರಾದ ಚಂದ್ರನಾಥ್ ಮಾತನಾಡಿ ‘ ದೇಶದ ಭವಿಷ್ಯ ಬದಲಿಸುವ ಶಕ್ತಿ ಯುವ ಜನತೆಗಿದೆ. ಚುನಾವಣೆಯಲ್ಲಿ ತಪ್ಪದೆ ಪಾಲ್ಗೊಳ್ಳುವ ಮೂಲಕ ಸಶಕ್ತ ಸರಕಾರವನ್ನು ತರುವ ಅವಕಾಶ ಪ್ರಜಾ ಪ್ರಭುತ್ವ ದಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಶುಭ ಹಾರೈಸಿದರು. ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಅಭಿರಾಮ್ ಬಿ.ಎಸ್ , ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಪುರುಷೋತ್ತಮ್, ಕ್ಯಾಂಪಸ್ ಮ್ಯಾನೇಜರ್ ಶಾಂತಿರಾಜ್ ಜೈನ್ ಸಹಕರಿಸಿದರು. ಆಂಗ್ಲ ವಿಭಾಗ ಮುಖ್ಯಸ್ಥರಾದ ವಿಕಾಸ್ ಹೆಬ್ಬಾರ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಂಜಿತ್ ನಿರೂಪಿಸಿದರು. ಗಣಿತ ಉಪನ್ಯಾಸಕ ದರ್ಶನ್ ವಂದಿಸಿದರು.