ಉಜಿರೆ: ಸರ್ವರೂ ಸ್ವಚ್ಛ ಭಾರತದ ಸಂಕಲ್ಪ ಮಾಡಬೇಕು. ಸ್ವಚ್ಛತೆಯ ವಿಷಯದಲ್ಲಿ ತುಂಬಾ ಕೆಳಮಟ್ಟದಲ್ಲಿ ಇದ್ದೇವೆ. ಸ್ವಚ್ಛತೆಯೆ ಸವಾಲಾಗುತ್ತಿದೆ. ಇದರ ಜಾಗೃತಿಗಾಗಿ ಎಲ್ಲರೂ ಶ್ರಮಪಡಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಸ್ವಚ್ಛತೆಯ ರಾಯಭಾರಿಗಳಾಗಬೇಕು ಎಂದು ಉಜಿರೆ ಗ್ರಾಮ ಪಂಚಾಯತ್ ಇದರ ಅಧ್ಯಕ್ಷರಾದ ಉಷಾಕಿರಣ ಕಾರಂತ್ ಹೇಳಿದರು.
ಇವರು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಅಂಗವಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಉಜಿರೆಯ ಬಸ್ ನಿಲ್ದಾಣದಲ್ಲಿ ನಡೆದ ಸ್ವಚ್ಛತಾ ಅಭಿಯಾನದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಯ ಮಹತ್ವ ಸಾರುವ ಬೀದಿ ನಾಟಕವನ್ನು ಪ್ರದರ್ಶನ ಮಾಡಿದರು.
ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಅವರು ಉಜಿರೆಯ ಪಂಚಾಯತ್ ಇದರ ವಾಚನಾಲಯಕ್ಕೆ ಡಾ. ವೀರೇಂದ್ರ ಹೆಗ್ಗಡೆಯವರ ಪುಸ್ತಕ ಸರಣಿಯ ಗ್ರಂಥಗಳನ್ನು ಕೊಡುಗೆಯಾಗಿ ನೀಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಬೇಬಿ , ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಶ್ಯಾಮಿಲ ಉಪಸ್ಥಿತರಿದ್ದರು.
ಸ್ವಯಂ ಸೇವಕಿ ಪಲ್ಲವಿ ನಿರೂಪಿಸಿ ವಂದಿಸಿದರು.