ಉಜಿರೆ: “ನಮ್ಮನ್ನು ಬೆಳೆಸಿ ಎತ್ತರಕ್ಕೆ ಏರಿಸಿದ ಗುರು ಹಿರಿಯರನ್ನು ಗೌರವಿಸಿ ಹಾಗೂ ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಸಂಪ್ರದಾಯ ಪೂಜಾ ವಿಧಿಗಳನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಉತ್ತಮ ಕಾರ್ಯ” ಎಂದು ಜಿಲ್ಲಾ ಪ್ರಶಸ್ತಿ ವಿಜೇತ ಎಸ್.ಡಿ.ಎಮ್ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕ ಡಾ.ರವೀಶ್ ಪಡುಮಲೆ ಹೇಳಿದರು.
ಇವರು ನ.25 ಎಸ್.ಡಿ. ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ದೀಪಾವಳಿಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಸಲುವಾಗಿ ಆಯೋಜಿಸಿದ್ದ 'ಜ್ಞಾನ ಜ್ಯೋತಿ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳಿಂದ ಲಕ್ಷ್ಮೀ ಪೂಜೆ, ನರಕ ಚತುರ್ದಶಿ, ಗೋ ಪೂಜೆ, ಬಲಿಪಾಡ್ಯಮಿ, ತುಳಸಿ ಪೂಜೆಗಳ ಪ್ರಾತ್ಯಕ್ಷಿಕೆಯನ್ನು ಅತಿಥಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ವಿದ್ಯಾರ್ಥಿಗಳು ಸಮೂಹ ಗಾಯನ ಮತ್ತು ಸಮೂಹ ನೃತ್ಯವನ್ನು ಮಾಡಿದರು. ಶಾಲಾ ವಿದ್ಯಾರ್ಥಿಗಳಿಗೆ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಅದ್ವೈತ್ ಸ್ವಾಗತಿಸಿ, ಪೃಥ್ವಿ ವಂದಿಸಿದ ಕಾರ್ಯಕ್ರಮವನ್ನು ಪಹಲ್ ಜೈನ್ ನಿರೂಪಿಸಿದರು.