ಪಡಂಗಡಿ: ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ತಾಲೂಕು ಘಟಕ ಬೆಳ್ತಂಗಡಿ ಇದರ ಆಶ್ರಯದಲ್ಲಿ, ಪಡಂಗಡಿ ಗ್ರಾಮ ಘಟಕದ ಸಭೆಯು ನ.26ರಂದು ಪೊಯ್ಯಗುಡ್ಡೆಯ ಶ್ರೀ ಸತ್ಯಸಾರಮಾನಿ ದೈವಸ್ಥಾನದ ಆವರಣದಲ್ಲಿ ತಾಲೂಕು ಘಟಕದ ಅಧ್ಯಕ್ಷ ದಿನೇಶ್ ಕೆ ಕೊಕ್ಕಡ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಘಟಕದ ಉಪಾಧ್ಯಕ್ಷ ರಾಮು ಪಡಂಗಡಿ, ಗೌರವ ಸಲಹೆಗಾರ ಗೋಪಾಲಕೃಷ್ಣ ಕುಕ್ಕಳ, ತಾಲೂಕಿನ ನಿಕಟಪೂರ್ವ ಕಾರ್ಯದರ್ಶಿ ಶರತ್ ಕೊಕ್ಕಡ, ಹಿರಿಯರಾದ ಶಂಕರ್, ತನಿಯಪ್ಪ, ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.
ಗೋಪಾಲಕೃಷ್ಣ ಕುಕ್ಕಳ ಪ್ರಸ್ತಾವಿಕವಾಗಿ ಮಾತಾಡುತ್ತಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಹಿನ್ನೆಲೆ, ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು, ಮತ್ತು ಈ ಸಮಸ್ಯೆಗಳನ್ನು ಎದುರಿಸಲು ಆದಿದ್ರಾವಿಡ ಸಮುದಾಯ ಸಂಘಟಿತರಾಗಬೇಕಾದ ಅನಿವಾರ್ಯತೆಯನ್ನು ಸಭೆಗೆ ವಿವರಿಸಿದರು.
ತಾಲೂಕು ಅಧ್ಯಕ್ಷ ದಿನೇಶ್ ಕೆ ಕೊಕ್ಕಡ ಮಾತನಾಡುತ್ತಾ ಆದಿದ್ರಾವಿಡ ಸಮುದಾಯದ ರಾಜ್ಯ ಸಮಾವೇಶದಲ್ಲಿ ಸರಕಾರಕ್ಕೆ ಸಲ್ಲಿಸಲಿರುವ ಹಕ್ಕೊತ್ತಾಯದ ಅಂಶಗಳನ್ನು ಸಭೆಗೆ ವಿವರಿಸಿ, ಸಮಾವೇಶದ ಯಶಸ್ಸಿಗೆ ಎಲ್ಲರೂ ಸಂಘಟಿತರಾಗಿ ಸಹಕರಿಸಲು ಕರೆನೀಡಿದರು.
ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ) ಬೆಳ್ತಂಗಡಿ, ಗ್ರಾಮ ಘಟಕ ಪಡಂಗಡಿಗೆ ನೂತನ ಅಧ್ಯಕ್ಷರಾಗಿ ಬಾಬು ಕೆ ಪಡ್ತಿರೆ, ಉಪಾಧ್ಯಕ್ಷರಾಗಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಕೆ. ಉಪಕಾರ್ಯದರ್ಶಿಯಾಗಿ ಶ್ರೀಮತಿ ಸುಶೀಲಾ, ಕೋಶಾಧಿಕಾರಿಯಾಗಿ ಬಾಬು ಪಿ, ಗೌರವಾಧ್ಯಕ್ಷರಾಗಿ ಶಂಕರ್, ಗೌರವ ಸಲಹೆಗಾರರಾಗಿ ಕೃಷ್ಣಪ್ಪ ಹಾಗೂ ತನಿಯಪ್ಪ ಇವರುಗಳು ಆಯ್ಕೆಯಾದರು.
ತಾಲೂಕು ಘಟಕದ ಉಪಾಧ್ಯಕ್ಷ ರಾಮು ಪಡಂಗಡಿ ಸ್ವಾಗತಿಸಿದರು. ನೂತನ ಅಧ್ಯಕ್ಷ ಬಾಬು ಪಡ್ತಿರೆ ವಂದಿಸಿದರು.