ಉಜಿರೆ: ಡಾ. ಬಿ. ಯಶೋವರ್ಮರ ಜನ್ಮದಿನ ಸ್ಮರಣಾರ್ಥ ವಿಚಾರಸಂಕಿರಣ

Suddi Udaya

ಉಜಿರೆ: ಚರಕ, ಸುಶ್ರುತರು ಹೇಳಿದಂತೆ ಪ್ರತಿಯೊಂದು ಸಸ್ಯದಲ್ಲಿಯೂ ಔಷಧೀಯ ಗುಣಗಳಿವೆ. ಹಸಿರು ಕ್ರಾಂತಿಯ ಮೂಲಕ ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯೂ, ಕರ್ತವ್ಯವೂ ಆಗಿದೆ ಎಂದು ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಹೇಳಿದರು.


ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ನಿವೃತ್ತ ಪ್ರಾಂಶುಪಾಲ ಕೀರ್ತೀಶೇಷ ಡಾ. ಬಿ. ಯಶೋವರ್ಮರ ಜನ್ಮದಿನಾಚರಣೆ ಸ್ಮರಣಾರ್ಥ ಮಂಗಳವಾರ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಆಯೋಜಿಸಿದ “ಸಸ್ಯವಿಜ್ಞಾನದಲ್ಲಿ ಇತ್ತೀಚಿನ ಬೆಳವಣಿಗೆಗಳು” ವಿಷಯದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಅಶ್ವತ್ಥಮರ, ನಾಚಿಕೆಮುಳ್ಳು, ಮಜ್ಜಿಗೆಸೊಪ್ಪು, ತುಳಸಿ ಮೊದಲಾದ ಅನೇಕ ಗಿಡಮೂಲಿಕೆಗಳಲ್ಲಿ ಔಷಧೀಯ ಗುಣ ಹಾಗೂ ರೋಗ ನಿರೋಧಕ ಶಕ್ತಿ ಇರುತ್ತದೆ. ಬೆಲೆ ಮತ್ತು ಬೆಳೆಗಳ ಏರಿಳಿತ, ಹವಾಮಾನ ವೈಪರೀತ್ಯ ಮೊದಲಾದ ಅನೇಕ ಸಮಸ್ಯೆಗಳನ್ನು ಎದುರಿಸಲು ಸುಸ್ಥಿರ ಹಾಗೂ ಸುಂದರ, ಪ್ರಶಾಂತ ಪ್ರಾಕೃತಿಕ ಪರಿಸರ ನಿರ್ಮಾಣ ಮತ್ತು ಸಂರಕ್ಷಣೆ ನಮ್ಮೆಲ್ಲ ಹೊಣೆಗಾರಿಕೆಯಾಗಿದೆ.


ಖ್ಯಾತ ಸಸ್ಯವಿಜ್ಞಾನಿಯೂ, ದಕ್ಷ ಆಡಳಿತದಾರರೂ ಆಗಿದ್ದ ಕೀರ್ತಿಶೇಷ ಬಿ. ಯಶೋವರ್ಮರು ೨೩ ವರ್ಷ ಕಾಲೇಜಿನ ಪ್ರಾಂಶುಪಾಲರಾಗಿ 18 ವರ್ಷ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ ಉಜಿರೆಯನ್ನು ಜ್ಞಾನಕಾಶಿಯಾಗಿಯೂ, ಸಸ್ಯಕಾಶಿಯಾಗಿಯೂ  ಬೆಳೆಸಿದ್ದಾರೆ.


ಸಿದ್ಧವನದ ಬಳಿ ಗಿಡಮೂಲಿಕೆಗಳ ಸಸ್ಯೋದ್ಯಾನ, ಕಾಲೇಜು ವಠಾರದಲ್ಲಿ ಸುಂದರ ಉದ್ಯಾನ, ಔಷಧೀಯ ಗಿಡಗಳು, ಎಲ್ಲಾ ಶಾಲಾ-ಕಾಲೇಜುಗಳ ಪರಿಸರದಲ್ಲಿ ಸುಂದರ ಉದ್ಯಾನ, ವಿದ್ಯಾರ್ಥಿನಿಲಯಗಳಲ್ಲಿ  ಬಳಸಿದ ನೀರನ್ನು ಉದ್ಯಾನ, ಗಿಡಗಳಿಗೆ ಮರುಬಳಕೆ :- ಇವೆಲ್ಲ ಅವರು ಅಳವಡಿಸಿದ ವಿನೂತನ ಚಟುವಟಿಕೆಗಳು. ಪ್ರತಿದಿನ ಅವರು ೨ ಗಂಟೆ ಕಾಲ ತೋಟಗಾರಿಕೆಗೆ ಮೀಸಲಿಟ್ಟಿದ್ದರು.


ಔಷಧೀಯ ಗಿಡಮೂಲಿಕೆಗಳ ಬಗ್ಯೆ ನಮಗೆ ಪರಿಪೂರ್ಣ ತಿಳುವಳಿಕೆ ಇರಬೇಕು. ಅರೆಬರೆ ಜ್ಞಾನ ಅಪಾಯಕಾರಿಯಾಗಿದೆ ಎಂದರು. ಕೆಲವು ವರ್ಷಗಳ ಹಿಂದೆ ಆಟಿ ಅಮಾವಾಸ್ಯೆ ದಿನ ವೇಣೂರಿನಲ್ಲಿ ಹಾಲೆ ಕೆತ್ತೆಯ (ತುಳು: ಪಾಲೆದ ಕೆತ್ತೆ) ಕಾಸರಕ್ಕಿನ ಕೆತ್ತೆಯ ಕಷಾಯ ಕುಡಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವುದನ್ನು ಉಲ್ಲೇಖಿಸಿದರು.


ಪ್ರಸ್ತುತ ಕಾಲೇಜಿನಲ್ಲಿ ಸಸ್ಯಸೌರಭ ಪತ್ರಿಕೆ, ಪ್ರಕೃತಿ-ಪರಿಸರ ಹಾಗೂ ಸಸ್ಯಗಳ ಬಗ್ಯೆ ಅಧ್ಯಯನ , ಸಂಶೋಧನೆ ಹಾಗೂ ಕ್ಷೇತ್ರಕಾರ್ಯದ ಮೂಲಕ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಡಾ. ಪ್ರದೀಪ್ ನಾವೂರು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೊಂದಿಗೆ ಸಸ್ಯಗಳ ಬಗ್ಯೆ ವಿಶೇಷ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಇದರ ಬಗ್ಯೆ ಹೆಚ್ಚು ಆಸಕ್ತಿ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಫಿನ್‌ಲೇಂಡ್‌ನ ತಂಪೆರೆ ವಿಶ್ವವಿದ್ಯಾಲ;ಯದಲ್ಲಿ ಪ್ರೊಫೆಸರ್ ಆಗಿರುವ ಡಾ. ನೋಣಪ್ಪ ಮಾತನಾಡಿ, ಕಾಲೇಜು ಹಾಗೂ ಸಿದ್ಧವನ ಗುರುಕುಲದಲ್ಲಿ ತನ್ನ ಶಿಕ್ಷಣಕ್ಕೆ ಅವಕಾಶ ನೀಡಿ ಪ್ರೋತ್ಸಾಹಿಸಿದ ಡಾ. ಬಿ. ಯಶೋವರ್ಮ ಹಾಗೂ ಪ್ರೊ. ಕುಮಾರ ಹೆಗ್ಡೆಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನವನ್ನು ಧನ್ಯತೆಯಿಂದ ಸ್ಮರಿಸಿದರು.


ಮಣಿಪಾಲದ ಎಂ.ಐ.ಟಿ.ಯ ಪ್ರೊ. ನರಸಿಂಹನ್ ಮತ್ತು ವಿಧುಶಂಕರ್ ಬಾಬು ವಿಚಾರಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ, ಮಾರ್ಗದರ್ಶನ ನೀಡಿದರು.
ಪ್ರೊ. ಶಕುಂತಳ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ  ಉಪನ್ಯಾಸಕಿ ಡಾ. ಮಂಜುಶ್ರೀ ಧನ್ಯವಾದವಿತ್ತರು. ಉಪನ್ಯಾಸಕ ಅಭಿಲಾಶ್ ಕೆ.ಎಸ್. ಕಾರ್ಯಕ್ರಮ ನಿರ್ವಹಿಸಿದರು. 

Leave a Comment

error: Content is protected !!