ಮಹಾ ಯೋಜನೆ: ಬೆಳ್ತಂಗಡಿ ಪಟ್ಟಣ ಪಂಚಾಯತನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಯೋಜನೆಯ ನಿಯಮಗಳನ್ನು ಅನ್ವಯಿಸದಂತೆ ಕ್ರಮ ತೆಗೆದುಕೊಳ್ಳಲು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಆಗ್ರಹ: ನಗರಾಭಿವೃದ್ದಿ ಸಚಿವರಿಂದ ಸಕಾರಾತ್ಮಕವಾಗಿ ಸ್ಪಂದನೆ ಸಮಸ್ಯೆ ಪರಿಹರಿಸುವ ಭರವಸೆ

Suddi Udaya

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ನಗರ ಪ್ರಾಧಿಕಾರದ ಮಹಾಯೋಜನೆಯನ್ನು ಜಾರಿಗೆ ತರುವ ಪ್ರಸ್ತಾವನೆಯಿಂದಾಗಿ ಇಲ್ಲಿನ ನಾಗರಿಕರಿಗೆ ಕಟ್ಟಡ ನಿರ್ಮಿಸಲು, ನವೀಕರಿಸಲು ಮತ್ತು ವಿಸ್ತರಣೆಗೆ ತೊಂದರೆಯಾಗುತ್ತಿರುವ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಪೌರಾಡಳಿತ ಸಚಿವರ ಗಮನ ಸೆಳೆದಿದ್ದಾರಲ್ಲದೆ ಬೆಳ್ತಂಗಡಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಯೋಜನೆಯ ನಿಯಮಗಳನ್ನು ಅನ್ವಯಿಸದೇ ಇರುವಂತೆ ಕ್ರಮ ತೆಗೆದುಕೊಳ್ಳುವಂತೆ ಲಿಖಿತ ಪ್ರಶ್ನೆಯ ಮೂಲಕ ಆಗ್ರಹಿಸಿದ್ದಾರೆ. ಇದಕ್ಕೆ ಸಚಿವರು ವಿಧಾನಸಭೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.


ಬೆಳ್ತಂಗಡಿ ನಗರ ಪಂಚಾಯತು 8.5 ಕಿ.ಮೀ ವ್ಯಾಪ್ತಿಯಲ್ಲಿದ್ದು ಸುಮಾರು 7500 ಜನಸಂಖ್ಯೆ ಇರುವ ರಾಜ್ಯದ ಅತಿ ಸಣ್ಣ ಪಂಚಾಯತು ಆಗಿದೆ. ಹೀಗಾಗಿ ನಗರ ಪ್ರದೇಶದ ಭೌಗೋಳಿಕ ಸ್ಥಿತಿಯನ್ನು ಪರಿಗಣಿಸಿ, ಮಹಾ ಯೋಜನೆಯನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದಲ್ಲಿ ಇದರಿಂದ ಸ್ವಂತ ಜಮೀನು ಹೊಂದಿದ್ದರೂ ತಮ್ಮ ಯಾವುದೇ ಉಪಯೋಗಕ್ಕೆ ಸಿಗದಂತೆ ಆಗಲಿದೆ. ಪಂಚಾಯತು ವ್ಯಾಪ್ತಿಯಲ್ಲಿ ನಿವೇಶನವನ್ನು ಹೊಂದಿರುವವರಿಗೆ ತಾವು ಕನಸು ಕಂಡಂತೆ ವಿನ್ಯಾಸ ನಕ್ಷೆಯನ್ನು ಅನುಮೊದಿಸಿ, ನಮೂನೆ -3 ಖಾತೆಯನ್ನು ನಗರ ಪಂಚಾಯತಿಯಿಂದ ನೀಡಲು ಹಾಗೂ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಕಟ್ಟಡ ಪರವಾನಿಗೆಯನ್ನು ಪಡೆಯಲು ತಾಂತ್ರಿಕ ಸಮಸ್ಯೆ ಎದುರಾಗಿದೆ. 2017ರಿಂದ ಜಮೀನು ಅಥವಾ ನಿವೇಶನ ಹೊಂದಿದ್ದರೂ ತಮ್ಮ ಜಮೀನನ್ನು ಯಾವುದೇ ವಿಧದಿಂದ ಅಭಿವೃದ್ಧಿ ಪಡಿಸಲು ಮತ್ತು ತಮ್ಮ ಅಗತ್ಯಗಳಿಗಾಗಿ ಅನ್ಯರಿಗೆ ವಿಕ್ರಯಿಸಲು, ಅಗತ್ಯಕ್ಕಾಗಿ ಬ್ಯಾಂಕಿನಿಂದ ಸಾಲ ಪಡೆಯಲು, ವ್ಯವಹರಿಸಲು ಈ ಯೋಜನೆಯಿಂದಾಗಿ ಅಡ್ಡಿಯಾಗಿದೆ. ಈ ತೊಂದರೆಯ ಬಗ್ಗೆ ಗಮನ ಹರಿಸಿ ತಮ್ಮ ಜಮೀನುಗಳನ್ನು ತಾವು ಉದ್ದೇಶಿಸದಂತೆ ಅಭಿವೃದ್ದಿ ಪಡಿಸಿ ವ್ಯವಹರಿಸಲು ಅನುಕೂಲವಾಗುವಂತೆ ಸೂಕ್ತ ಆದೇಶ ಮಾಡಿ ನ್ಯಾಯ ಒದಗಿಸುವಂತೆ ನಗರ ವ್ಯಾಪ್ತಿಯ ಸಾರ್ವಜನಿಕರು ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಯವರಿಗೆ ಪತ್ರವನ್ನು ಬರೆದಿದ್ದರು. ಇದರ ಬಗ್ಗೆಯೂ ಪ್ರತಾಪಸಿಂಹ ನಾಯಕ್‌ ಅವರು ವಿಧಾನಪರಿಷತ್‌ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.


ಬೆಳ್ತಂಗಡಿ ನಗರ ಪಂಚಾಯತು ವ್ಯಾಪ್ತಿಗಳಿಗೊಳಪಟ್ಟ ನಿವೇಶನಗಳನ್ನು ವಿಶೇಷ ಭೌಗೋಳಿಕ ಹಿನ್ನೆಲೆ ಹೊಂದಿರುವ ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ 2017 ರ ಪೂರ್ವದಲ್ಲಿ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತಿತ ಆಸ್ತಿಗಳನ್ನು ಹಾಗೂ ಅವುಗಳ ಅಂಶದ ಆಸ್ತಿಗಳಿಗೆ ಸಂಬಂದಿಸಿದಂತೆ, ಉದ್ದೇಶಿತ ಮಹಾ ಯೋಜನೆಯ ನಿಯಮಗಳಿಗೊಳಪಡಿಸದೇ, ಈ ಹಿಂದೆ ನೀಡಿಕೊಂಡು ಬಂದಂತೆ ನಮೂನೆ-3 ಖಾತೆಯನ್ನು ಪ್ರಕೃತ ಸ್ಥಿತಿಗನುಸರಿಸಿ ವಿನ್ಯಾಸ ನಕ್ಷೆ ನೀಡಿ ಅಧಿಕೃತ ನಿವೇಶನಗಳನ್ನು ಅನುಮೋದಿಸಿ ಎಲ್ಲಾ ವಿಧದಿಂದ ವ್ಯವಹರಿಸಲು ಅನುಕೂಲವಾಗುವಂತೆ ಸೂಕ್ತ ಆದೇಶ ಮಾಡಿ ಸಂಬಂದಪಟ್ಟ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ನಾಯಕ್‌ ಸಚಿವರಲ್ಲಿ ಒತ್ತಾಯಿಸಿದ್ದಾರೆ.

Leave a Comment

error: Content is protected !!