ಡಿ.17 : ಬೆಳ್ತಂಗಡಿ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸುವರ್ಣ “ಕರ್ನಾಟಕ: ಭಾಷೆ ಸಾಹಿತ್ಯ ಸಂಸ್ಕೃತಿ” ಆಶಯದ ಹಿನ್ನೆಲೆಯಲ್ಲಿ ಸಮ್ಮೇಳನದ ರೂಪುರೇಷೆ: ಜ್ಞಾನಪೀಠ ಪುರಸ್ಕೃತರಾಗಿರುವ ಎಂಟು ಮಂದಿ ಸಾಹಿತ್ಯ ಲೋಕದ ದಿಗ್ಗಜರ ನೆನಪು

Suddi Udaya

ಬೆಳ್ತಂಗಡಿ: ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕಿನ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ಈ ಬಾರಿ ಬೆಳ್ತಂಗಡಿಯ ಹಳೆಕೋಟೆ ವಾಣಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ. 17 ಆದಿತ್ಯವಾರ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಯದುಪತಿ ಗೌಡ ಹೇಳಿದರು.

ಅವರು ಡಿ.11ರಂದು ವಾಣಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನ ನಿವೃತ್ತ ಪ್ರಾಚಾರ್ಯರಾದ ಎ. ಕೃಷ್ಣಪ್ಪ ಪೂಜಾರಿಯವರ ಸರ್ವಾಧ್ಯಕ್ಷತೆಯಲ್ಲಿ ಜರಗಲಿದೆ ಎಂದು ತಿಳಿಸಿದರು.
ಈ ವರ್ಷ ಸುವರ್ಣ ಕರ್ನಾಟಕ ವರ್ಷವಾದ್ದರಿಂದ ಸುವರ್ಣ “ಕರ್ನಾಟಕ: ಭಾಷೆ ಸಾಹಿತ್ಯ ಸಂಸ್ಕೃತಿ” ಆಶಯದ ಹಿನ್ನೆಲೆಯಲ್ಲಿ ಸಮ್ಮೇಳನದ ರೂಪುರೇಷೆ ತಯಾರಿಸಲಾಗಿದೆ.

ಕಲ್ಪತರು ಆವರಣದಿಂದ ಸಮ್ಮೇಳನದ ಚಪ್ಪರದವರೆಗೆ ಮೆರವಣಿಗೆಯಲ್ಲಿ ಗಣ್ಯರನ್ನು ಬರಮಾಡಿಕೊಳ್ಳಲಾಗುವುದು. 9.30ಕ್ಕೆ ಸರಿಯಾಗಿ ರಾಷ್ಟ್ರ ಧ್ವಜವನ್ನು ಶಾಸಕರಾದ ಹರೀಶ್ ಕುಮಾ‌ರ್, ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥರವರು ಮತ್ತು ಕನ್ನಡ ಧ್ವಜವನ್ನು ತಾಲೂಕಿನ ಅಧ್ಯಕ್ಷರಾದ ಡಿ ಯದುಪತಿ ಗೌಡರು ಆರೋಹಣ ಮಾಡುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಅನಂತರ ಉದ್ಘಾಟನ ಸಮಾರಂಭ ಜರಗುತ್ತದೆ ಎಂದು ವಿವರಿಸಿದರು.
ಉದ್ಘಾಟಕರಾಗಿ ಚಿಕ್ಕಮಗಳೂರಿನ ಸಾಹಿತಿಗಳು, ಬರಹಗಾರರು, ನಾಟಕ ಅಕಾಡೆಮಿಯ ಮಾಜಿ ಸದಸ್ಯರೂ ಆಗಿರುವ ನಾಗರಾಜ್ ರಾವ್ ಕಲ್ಕಟ್ಟೆಯವರು ಆಗಮಿಸುತ್ತಾರೆ. ಸಮ್ಮೇಳನದ ಸಂಚಿಕೆ ‘ಚಾರುಮುಡಿ’ ಬಿಡುಗಡೆಯನ್ನು ಶಾಸಕರಾದ ಹರೀಶ್ ಪೂಂಜರವರು ಮಾಡಲಿದ್ದಾರೆ. ಅತಿಥಿಗಳಾಗಿ ಶ್ರೀ ಧ ಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಸತೀಶ್ಚಂದ್ರ ಎಸ್., ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪಿ ಕುಶಾಲಪ್ಪ ಗೌಡ, ಸಮಾಜಸೇವಕ, ಸಾಂಸ್ಕೃತಿಕ ಮುಂದಾಳುಗಳೂ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಗಳಾಗಿರುವ ಹಲೇಜಿಯ ಕಿರಣ್ ಕುಮಾರ್ ಪುಷ್ಪಗಿರಿ ಇವರು ಭಾಗವಹಿಸಲಿದ್ದಾರೆ ಎಂದರು.


ಗೋಷ್ಠಿಗಳು:
ಜ್ಞಾನಪೀಠ ಪುರಸ್ಕೃತರಾಗಿರುವ ಎಂಟು ಮಂದಿ ಸಾಹಿತ್ಯ ಲೋಕದ ದಿಗ್ಗಜರ ನೆನಪು, ಸುವರ್ಣ ಕರ್ನಾಟಕ: ಭಾಷೆ, ಸಾಹಿತ್ಯ ಸಂಸ್ಕೃತಿ ಸಂವಾದ ಗೋಷ್ಠಿ ನಡೆಯಲಿದೆ. ಅಪರಾಹ್ನ ಬೆಳ್ತಂಗಡಿ ತಾಲೂಕಿನ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಯುವ ಕವಿಗೋಷ್ಠಿ ನಡೆಯಲಿದೆ. ಆಮೇಲೆ ನಾಡಿನ ಸಮೃದ್ಧಿಗಾಗಿ ಸೇವೆ ಸಲ್ಲಿಸಿದ ಹಿರಿಯರಾದ ಡಾ. ಕೆ ಎಂ ಶೆಟ್ಟಿ, ಬಳ್ಳಮಂಜ(ಸಾಹಿತ್ಯ), ಗೋಪಾಲಕೃಷ್ಣ ಭಟ್ ಕಾಂಚೋಡು(ದೇಶ ಸೇವೆ), ಬೇಬಿ ಪೂಜಾರಿ ಪಿಲ್ಯ(ನಾಟಿ ವೈದ್ಯರು), ಡಾ. ಎನ್ ಎಂ ಜೋಸೆಫ್(ಶಿಕ್ಷಣ) ಮತ್ತು ಹೈದರಾಲಿ ಹಳ್ಳಿಮನೆ ಕೊಳ್ಳೂರು(ಜಾನಪದ ವಸ್ತು ಸಂಗ್ರಾಹಕರು) ಇವರಿಗೆ ಸನ್ಮಾನ ಮತ್ತು ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ. ಸಮಾರೋಪ ಭಾಷಣಕಾರರಾಗಿ ಸುಳ್ಯದ ಡಾ. ಪೂವಪ್ಪ ಕಣಿಯೂರುರವರನ್ನು ಆಹ್ವಾನಿಸಲಾಗಿದೆ. ಈ ಸಂದರ್ಭದಲ್ಲಿ ಅತಿಥಿಗಳಾಗಿ ಶಾಸಕರಾದ ಪ್ರತಾಪಸಿಂಹ ನಾಯಕ್, ಶರತ್ ಕೃಷ್ಣ ಪಡುವೆಟ್ನಾಯ ಉಜಿರೆ, ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷರಾದ ಎಚ್ ಪದ್ಮ ಗೌಡ, ಸಾಹಿತ್ಯ ಸಂಸ್ಕೃತಿ ಪೋಷಕರಾದ ಶ್ರೀಶ ಮುಚ್ಚಿನ್ನಾಯರವರು ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದ ವಿಶೇಷತೆ:

ತಾಲೂಕಿನ ಸಾಹಿತ್ಯ ಸಂಸ್ಕೃತಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಹಳಷ್ಟು ಕೊಡುಗೆ ನೀಡಿದ ರಮಾನಂದ ಸಾಲಿಯಾನ್ ಬೆಳ್ತಂಗಡಿಯವರ ಹೆಸರಿನ ವೇದಿಕೆಯಲ್ಲಿ ಸಮ್ಮೇಳನದ ಕಾರ್ಯಕಲಾಪ ಜರಗಲಿದ್ದು ಅವರ ಸಂಸ್ಮರಣೆಯ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಪ್ರತೀ ಗೋಷ್ಠಿ, ಭಾಷಣದ ತರುವಾಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಮತ್ತು ನೃತ್ಯ ನಡೆಯಲಿದೆ. ಮಧ್ಯಾಹ್ನದ ಅವಧಿಯಲ್ಲಿ ಯುವ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನಾಮೃತ ನಡೆಯಲಿದೆ ಎಂದರು.
ಸಂಪನ್ಮೂಲ ಅತಿಥಿಗಳು:
ಶಿವ ಪ್ರಸಾದ್ ಸುರ್ಯ, ಕಲಾಕುಂಚದ ಕು. ಮೆಹಕ್ ಪ್ರಸನ್ನ ಕಾಲೇಜು, ಡಾ. ಶ್ರೀಧರ ಭಟ್ ಉಜಿರೆ, ಡಾ. ಸುಬ್ರಹ್ಮಣ್ಯ ಭಟ್ ಮೇಲಂತಬೆಟ್ಟು, ಮಧೂರು ಮೋಹನ ಕಲ್ಲೂರಾಯ, ಚಂದ್ರಶೇಖರ ಗೌಡ, ವಸಂತಿ ಟಿ ನಿಡ್ಲೆ ಮೊದಲಾದವರು ಆಗಮಿಸಲಿದ್ದಾರೆ.
ಸಮ್ಮೇಳನದ ತಯಾರಿ:
ಬೆಳ್ತಂಗಡಿ ನಗರ ಪಂಚಾಯತ್ತಿನ ಮಾಜಿ ಉಪಾಧ್ಯಕ್ಷರು ಹಾಗೂ ಸಮ್ಮೇಳನ ಸಂಯೋಜನಾ ಸಮಿತಿ ಅಧ್ಯಕ್ಷ ಜಯಾನಂದ ಗೌಡ ಅವರು ಮಾಹಿತಿ ನೀಡಿ, ಸಮ್ಮೇಳನದ ಯಶಸ್ಸಿಗೆ ವಿವಿಧ ಕೆಲಸಗಳ ನಿರ್ವಹಣೆಯಲ್ಲಿ ಒಂಬತ್ತು ಉಪ ಸಮಿತಿಗಳು ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಊರಿನ ಗಣ್ಯರು, ಸಾಹಿತ್ಯಗಳು, ಸಂಘ ಸಂಸ್ಥೆಗಳು ಮತ್ತು ಸಾಮಾಜಿಕ
ಪ್ರಮುಖರನ್ನೊಳಗೊಂಡಿರುವ ಸಲಹಾ ಸಮಿತಿಯು ಶ್ರಮಿಸುತ್ತಿದೆ. ಅಂದಾಜು ಒಂದೂವರೆ ಸಾವಿರ ಪ್ರತಿನಿಧಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಲ್ಲಿ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ಪ್ರತಿನಿಧಿಗಳನ್ನಾಗಿ ಆಹ್ವಾನಿಸಲಾಗಿದೆ. ಈ ನಿಟ್ಟಿನಲ್ಲಿ ಆಮಂತ್ರಣ ವಿತರಣೆ ಮತ್ತು ಭೇಟಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಈ ಸಮ್ಮೇಳನದಲ್ಲಿ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಾಹಿತ್ಯಾಸಕ್ತರೆಲ್ಲರೂ ಭಾಗವಹಿಸಬೇಕು, ಸಮಾರೋಪದ ನಂತರ ಉಡುಪಿಯ ಕಲಾಮಯಂ ತಂಡದವರಿಂದ ವಿಶಿಷ್ಟವಾದ ಜನಪದ ನೃತ್ಯ, ಸಂಗೀತ ಮತ್ತು ವಾದ್ಯ ಪರಿಕರಗಳ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ವಿವರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ ಗೌಡ ಕೊಯ್ಯೂರು, ಕಾರ್ಯದರ್ಶಿಗಳಾದ ವಿಷ್ಣು ಪ್ರಕಾಶ ಬೆಳ್ತಂಗಡಿ, ಕೋಶಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಎನ್., ಸನ್ಮಾನ ಸಮಿತಿಯ ಸಂಚಾಲಕ ಲಕ್ಷ್ಮಣ್ ಪೂಜಾರಿ, ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು.

Leave a Comment

error: Content is protected !!