ನಿಡ್ಲೆ: ಯಾವುದೇ ಕೆಲಸವನ್ನಾಗಲಿ ಪ್ರೀತಿಯಿಂದ ಮಾಡಬೇಕು. ಜೊತೆಗೆ ಶ್ರಮ ಹಾಗೂ ತಾಳ್ಮೆಯೊಂದಿಗೆ ದುಡಿದಾಗ ಮಾತ್ರ ಉದ್ಯೋಗ ಅಥವಾ ಉದ್ಯಮದಲ್ಲಿ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯ ತರಬೇತಿ ಉಪನ್ಯಾಸಕ ಬಿ. ಸಂತೋಷ್ ಶೆಟ್ಟಿ ಉಜಿರೆ ಹೇಳಿದರು.
ಅವರು ನಿಡ್ಲೆಯ ಉನ್ನತೀಕರಿಸಿದ ಹಿ. ಪ್ರಾ. ಶಾಲೆ ಬರೆಂಗಾಯದಲ್ಲಿ ನಡೆದ ಮಲೆಕುಡಿಯರ ಸಂಘ ನಿಡ್ಲೆ-ಕಳೆಂಜ-ಪುದುವೆಟ್ಟು ವಲಯ ಸಮಿತಿಯು ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಸ್ವ ಉದ್ಯೋಗ, ಅದರ ತರಬೇತಿ ಹಾಗೂ ರುಡ್‌ಸೆಟ್ ಸಂಸ್ಥೆಯಲ್ಲಿ ದೊರೆಯುವ ಉಚಿತ ತರಬೇತಿಗಳ ಬಗ್ಗೆ ಮಾಹಿತಿ ನೀಡಿ, ಪ್ರೇರಣಾ ಮಾತುಗಳನ್ನು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಲೆಕುಡಿಯರ ಸಂಘ ತಾಲೂಕು ಸಮಿತಿ ಅಧ್ಯಕ್ಷ ಶಿವರಾಮ್ ಉಜಿರೆ ಮಾತನಾಡಿ ಸಂಘವು ಸಮುದಾಯದ ಅಭಿವೃದ್ಧಿಗಾಗಿ ಮಾಡುವಂಥ ಕಾರ್ಯಕ್ರಮಗಳಿಂದ ಜನರು ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಮನೆಯಿಂದ ಕನಿಷ್ಟ ಒಬ್ಬರಾದರೂ ಸಭೆಗಳಲ್ಲಿ ಭಾಗವಹಿಸುವ ಬಗ್ಗೆ ಗಮನ ಹರಿಸಬೇಕು. ಪ್ರತಿ ಕುಟುಂಬವೂ ಕೂಡ ಎಲ್ಲಾ ರೀತಿಯಲ್ಲಿ ಸಶಕ್ತರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ನಿಡ್ಲೆ ವಲಯ ಸಮಿತಿಯ ಅಧ್ಯಕ್ಷ ಜಯೇಂದ್ರ ಎಂ. ಮಾತನಾಡಿ ಇಂದಿನ ದಿನಗಳಲ್ಲಿ ಎಲ್ಲಾ ವಯೋಮಾನದವರನ್ನು ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹಾಗಾಗಿ ಸಾಕಷ್ಟು ಜಾಗರೂಕತೆ ವಹಿಸಬೇಕು. ಸ್ವ ಉದ್ಯೋಗಗಳಲ್ಲಿ ತೊಡಗಿಕೊಂಡು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿ ಸಮಾಜದಲ್ಲಿ ಬೆಳೆಯಬೇಕು ಎಂದರು.
ಬೆಳ್ತಂಗಡಿ ತಾಲೂಕಿನ ಲ್ಯಾಂಪ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಹಾಗೂ ಅಣಿಯೂರು ಲ್ಯಾಂಪ್ಸ್ ಶಾಖೆಯ ಪ್ರಬಂಧಕ ಚಿದಾನಂದ ಲ್ಯಾಂಪ್ಸ್‌ನಿಂದ ದೊರೆಯುವ ಸೌಲಭ್ಯ ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು.
ಸಂಘದ ಜಿಲ್ಲಾ ಸಮಿತಿಯ ವಕ್ತಾರರಾದ ಉಮಾನಾಥ್ ಧರ್ಮಸ್ಥಳ ಮಾತನಾಡಿ ಸಮುದಾಯದ ಜನರು ಗ್ರಾಮ ಮಟ್ಟದಲ್ಲಿ ಮಾತ್ರವಲ್ಲದೆ ತಾಲೂಕು, ಜಿಲ್ಲಾ ಮಟ್ಟಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಗಣೇಶ್ ರಾಜ್‌ರನ್ನು ಊರಿನ ಹಿರಿಯರಾದ ಚಂದಪ್ಪ ಎಂ. ಕೆ. ಹಾಗೂ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ಯಾಮಲಾ ಅವರನ್ನು ಸರೋಜಿನಿ ಮತ್ತು ಲಲಿತಾ ಹಾಗೂ ಗಣ್ಯರು ಸಂಘದ ಪರವಾಗಿ ಗೌರವಿಸಿದರು.
ಸೌಜನ್ಯ, ಸುಕನ್ಯಾ, ಶರಣ್ಯ, ಶ್ರಾವ್ಯ ಪ್ರಾರ್ಥನೆ ಮಾಡಿದರು, ಗಿರೀಶ್ ನಿಡ್ಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಹಿತ್ ಸ್ವಾಗತಿಸಿ, ಚಿತ್ರಲೇಖಾ ಧನ್ಯವಾದ ಸಲ್ಲಿಸಿದರು. ಮಾನ್ಯತಾ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸುಜಿತ್, ಹರಿಪ್ರಸಾದ್, ಸತೀಶ ಬೂಡುಜಾಲು, ಶಾಂತಾ, ಗಿರೀಶ, ಬಾಲಕೃಷ್ಣ, ನಾರಾಯಣ ಬೂಡುಜಾಲು, ವಸಂತ ಏಕ ಮುಂತಾದವರು ಉಪಸ್ಥಿತರಿದ್ದರು.