ಶಿಬಾಜೆ: ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸಿಮೆಂಟ್ ಶೀಟ್ ಛಾವಣಿಯ ಕಟ್ಟಡವನ್ನು ಧ್ವಂಸ ಮಾಡಿದ ಪ್ರಕರಣದಲ್ಲಿ ಶ್ರೀಮತಿ ಲತಾ ಅವರು ನೀಡಿದ ದೂರಿನಂತೆ ಎಂಟು ಮಂದಿ ಹಾಗೂ ಇತರರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಡಿ.20 ರಂದು ಪ್ರಕರಣ ದಾಖಲಾಗಿದೆ.
ಶಿಬಾಜೆ ಗ್ರಾಮದ ನಿವಾಸಿ ಲತಾ ಎಂಬವರು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ನನ್ನ ಗಂಡ ಕೆ.ಆರ್ ವಾಸುರವರು ಶಿಬಾಜೆ ಗ್ರಾಮದ ಆರಂಪಾದೆ ಎಂಬಲ್ಲಿ ಸುಮಾರು 25 ವರ್ಷಗಳ ಹಿಂದೆ ಸಿಮೆಂಟ್ ಶೀಟ್ ಛಾವಣಿಯ ಕಟ್ಟಡ ನಿರ್ಮಿಸಿ, ಅದರಲ್ಲಿ ಪರವಾನಿಗೆ ಪಡೆದು ಜಿನಸು ಅಂಗಡಿ ವ್ಯಾಪಾರ ಮಾಡಿಕೊಂಡಿರುತ್ತಾರೆ. ಸದರಿ ಜಾಗದ ತಕರಾರಿಗೆ ಸಂಬಂಧಿಸಿ, ಡಿ.14 ರಂದು ಟಿ.ಕೆ ಮ್ಯಾಥ್ಯೂ ಮತ್ತು ಪ್ರಮೋದ್ ರವರುಗಳು ಸದ್ರಿ ಅಂಗಡಿ ಕಟ್ಟಡ ಇರುವ ಜಮೀನಿನ ಸುತ್ತ ಬೇಲಿ ನಿರ್ಮಾಣ ಮಾಡಿದ್ದು, ಸದ್ರಿ ಬೇಲಿಯನ್ನು ನಾವು ತೆರವುಗೊಳಿಸಿರುತ್ತೇವೆ.
ಡಿ.19ರಂದು ರಾತ್ರಿ ಟಿ ಕೆ ಮ್ಯಾಥ್ಯೂ, ಪ್ರಮೋದ್, ಸನೋಧ್ ಕುಮಾರ್, ಕುರಿಯಾಕೋಸ್, ಜಯರಾಜ, ಎನ್.ಎಮ್ ಕುರಿಯಾಕೋಸ್, ರೋಬಿನ್ಸ್, ಸಂತೋಷ್ ಯು. ಜಿ ಮತ್ತು ಇತರ ೧೫ ಜನರು ಮಾರಕಾಯುಧಗಳನ್ನು ಹಿಡಿದುಕೊಂಡು ಅಂಗಡಿ ಕಟ್ಟಡ ಇರುವ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಟ್ಟಡವನ್ನು ದ್ವಂಸ ಮಾಡಲು ಪ್ರಾರಂಭಿಸಿದ್ದು, ಈ ವೇಳೆ ನಾವು ಆಕ್ಷೇಪಿಸಿದಾಗ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿರುವುದಲ್ಲದೇ ನನ್ನ ಗಂಡನ ಮಾಲಕತ್ವದ ಅಂಗಡಿಯನ್ನು ದ್ವಂಸ ಮಾಡಿ ಸುಮಾರು ರೂ. 50 ಸಾವಿರ ನಷ್ಟವನ್ನುಂಟು ಮಾಡಿರುತ್ತಾರೆ ಎಂಬ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 110/2023 ಕಲಂ: 143, 147, 148, 447, 427, 341, 323,504,506(2) 395 ಜೊತೆಗೆ 149 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.