ಬೆಳ್ತಂಗಡಿ: ಉಜಿರೆ ಗ್ರಾಮದ ಗುರಿಪಳ್ಳದ ತಾರಗಂಡಿ ಕಿರು ಸೇತುವೆಯು ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಇನ್ನೇನು ಕೆಲವೇ ದಿವಸಗಳಲ್ಲಿ ಕುಸಿಯುವ ಬೀತಿಯಲ್ಲಿದೆ ಇದನ್ನು ಮನಗಂಡ ರಕ್ಷಿತ್ ಶಿವರಾಂರವರು ಊರವರ ಬೇಡಿಕೆಯಂತೆ ಇತ್ತೀಚೆಗೆ ಸೇತುವೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಲೋಕೋಪಯೋಗಿ ಉಪ ವಿಭಾಗ ಬೆಳ್ತಂಗಡಿಯ ಅಧಿಕಾರಿಗಳನ್ನು ಸಂಪರ್ಕ ಮಾಡಿ ಸಮಗ್ರ ವರದಿ ತಯಾರಿಸಿದರು.
ಈ ವರದಿಯನ್ನು ಹಾಗೂ ಊರವರ ಬಹುದಿನಗಳ ಬೇಡಿಕೆಯ ಪತ್ರವನ್ನು ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಇವರನ್ನು ಬೇಟಿಯಾಗಿ ಅತೀ ತುರ್ತಾಗಿ ಈ ಕಿರು ಸೇತುವೆಗೆ ಅನುದಾನ ಒದಗಿಸಿ ಮುಂದಿನ ಮಳೆಗಾಲ ಪ್ರಾರಂಭದ ಒಳಗೆ ಸೇತುವೆ ನಿರ್ಮಿಸಿ ಜನರ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಶೀಘ್ರದಲ್ಲೆ ಕಿರು ಸೇತುವೆಗೆ ಅನುದಾನ ಬಿಡುಗಡೆಗೊಳಿಸುತ್ತೇವೆ ಎಂಬ ಭರವಸೆ ನೀಡಿದರು.
ಈ ಸೇತುವೆಯ ಮೂಲಕ ಬಂಗಾಡಿ- ಕೊಲ್ಲಿ- ಇಂದಬೆಟ್ಟು- ಗುರಿಪಳ್ಳಕ್ಕೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುತಿದ್ದು ನೂರಾರು ವಿಧ್ಯಾರ್ಥಿಗಳು ದಿನನಿತ್ಯ ಈ ಸೇತುವೆಯ ಮೂಲಕ ಹಾದು ಶಾಲೆಗಳಿಗೆ ಹೋಗುತ್ತಿದ್ದಾರೆ. ಅತೀ ಅಗತ್ಯವಾದ ಈ ಸೇತುವೆಯು ಕುಸಿಯುವ ಮುಂಚಿತವಾಗಿ ಹೊಸ ಸೇತುವೆ ನಿರ್ಮಾಣ ಆಗಿ ಉದ್ಘಾಟನೆಗೊಂಡರೆ ಈ ಸಂಪರ್ಕವನ್ನು ಅವಲಂಬಿಸಿದ ಅದೆಷ್ಟೋ ಕುಟುಂಬಗಳಿಗೆ ಉಪಯೋಗವಾಗಲಿದೆ. ರಕ್ಷಿತ್ ಶಿವರಾಂರವರ ಈ ಪ್ರಯತ್ನ ಊರವರಿಗೆ ಹೊಸ ಆಶಾಭಾವನೆ ಹುಟ್ಟಿಸಿದೆ.