ಬೆಳ್ತಂಗಡಿ: ಸುದ್ದಿ ಉದಯ ಬೆಳ್ತಂಗಡಿ ಇದರ ವತಿಯಿಂದ ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಹೊರ ತಂದ ‘ಬೆಳಕಿನ ಉದಯ’ ದೀಪಾವಳಿ ಸಂಚಿಕೆಯಲ್ಲಿ ಓದುಗರಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಓದುಗರಿಗೆ ಹಮ್ಮಿಕೊಂಡ ಅದೃಷ್ಟ ಕೂಪನ್‌ನ ಡ್ರಾ ಕಾರ್ಯಕ್ರಮ ಡಿ.23 ರಂದು ಸುದ್ದಿ ಉದಯ ಕಚೇರಿಯಲ್ಲಿ ಜರುಗಿತು.
ಬೆಳಕಿನ ಉದಯ, ಸುದ್ದಿ ಉದಯ ದೀಪಾವಳಿ ಸಂಚಿಕೆಯಲ್ಲಿ ಮಹಿಳೆಯರಿಗೆ ‘ಸೀರೆನಾರಿ’, ಸಣ್ಣ ಮಕ್ಕಳಿಗೆ ಮನೆಮಗು, ಸಹೋದರ-ಸಹೋದರಿಗೆ ಸೂಪರ್ ಸಿಬ್ಲಿಂಗ್ಸ್, ಶಾಲಾ ಮಕ್ಕಳಿಗೆ ಚಿತ್ರಕಲೆ, ಫೋಟೋಗ್ರಾಫರ‍್ಸ್‌ಗಳಿಗೆ ಕ್ಲಿಕ್ ಸ್ಪರ್ಧೆ ಜೊತೆಗೆ ಓದುಗರಿಗೆ ಕವನ ಸ್ಪರ್ಧೆ ಸಣ್ಣಕಥೆ ಮೊದಲಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಓದುಗರಿಗೆ ರೂ.25 ಸಾವಿರ ನಗದು ಬಹುಮಾನ ಘೋಷಿಸಲಾಗಿತ್ತು. ಅಲ್ಲದೆ ವಸುದೈವಕುಟುಂಬಕಂ, ಕಥೆ, ಕವನ, ಲೇಖನ, ಚಿತ್ರಕಲೆ ಸೇರಿದಂತೆ ತಾಲೂಕಿನ ಬರಹಗಾರರಿಗೆ, ಸಾಹಿತಿಗಳಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪುಟ್ಟ ಮಕ್ಕಳಿಗೆ ವೈವಿಧ್ಯಮಯ ಅಂಕಗಳಿಗೆ ವೇದಿಕೆ ಕಲ್ಪಿಸಲಾಗಿತ್ತು.
‘ಮನೆ ಮಗು ಸ್ಪರ್ಧೆ ಮತ್ತು ಸೂಪರ್ ಸಿಬ್ಲಿಂಗ್ಸ್‌ನ ಸ್ಪರ್ಧೆಗಳ ಬಹುಮಾನ ಪ್ರಯೋಜಕರಾಗಿದ್ದ, ಬೆಳ್ತಂಗಡಿ ತಾಲೂಕಿನ ಜನಪ್ರಿಯ ಸಂಸ್ಥೆ “ಬೆಳ್ತಂಗಡಿ ಪವರ್ ಆನ್ ಬ್ಯಾಟರಿ” ಸಂಸ್ಥೆಯ ಮಾಲಕ ಶೀತಲ್ ಜೈನ್ ಅವರು ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಿ, ವೈವಿಧ್ಯಮಯ ಸ್ಪರ್ಧೆ ಹಮ್ಮಿಕೊಂಡ ಸುದ್ದಿ ಉದಯ ಪತ್ರಿಕಾ ಬಳಗಕ್ಕೆ ಶುಭ ಹಾರೈಸಿದರು. ‘ಸೀರೆ ನಾರಿ’ ಬಹುಮಾನ ಪ್ರಾಯೋಜಕರಾದ ಬೆಳ್ತಂಗಡಿ ತಾಲೂಕಿನಲ್ಲಿ ಮನೆಮತಾಗಿರುವ ಉಜಿರೆಯ ಪ್ರಸಿದ್ಧ ಜವುಳಿ ಮಳಿಗೆ “ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್”ನ ಮಾಲಕ ಮೋಹನ್ ಚೌಧರಿ ಅವರು ಸೀರೆನಾರಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ದೀಪಾವಳಿಯಂತಹ ಹಬ್ಬಗಳು ಪ್ರೇರಣೆಯಾಗಿದ್ದು, ಬೆಳೆಯುವ ಪ್ರತಿಭೆಗಳಿಗೆ ಸುದ್ದಿ ಉದಯ ಪತ್ರಿಕೆ ಉತ್ತಮ ವೇದಿಕೆಯನ್ನು ಒದಗಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರಕಲೆ ಸ್ಪರ್ಧೆಯ ಬಹುಮಾನ ಪ್ರಯೋಜಕರಾದ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾದ ಸಂಸ್ಥೆ ಬೆಳ್ತಂಗಡಿ ಪ್ರತೀಕ್ಷಾ ಫ್ಯಾನ್ಸಿ & ಗಿಫ್ಟ್ ಸೆಂಟರ್‌ನ ಮಾಲಕ ಚಿದಾನಂದ ಇಡ್ಯ ಅವರು ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಸುದ್ದಿ ಉದಯ ಪತ್ರಿಕೆ ಆರಂಭವಾಗಿ ಹತ್ತು ತಿಂಗಳಲ್ಲಿ ಸ್ವಂತ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಫೋಟೋಗ್ರಾಫರ‍್ಸ್‌ಗಳಿಗೆ ಹಮ್ಮಿಕೊಂಡ ಕ್ಲಿಕ್ ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರಾಯೋಜಕರಾದ ಸ್ವರ್ಣೋಧ್ಯಮದಲ್ಲಿ ಪ್ರಸಿದ್ಧಿ ಪಡೆದಿರುವ ಮುಳಿಯ ಜುವೆಲ್ಸ್ ಸಂಸ್ಥೆಯ ವ್ಯವಸ್ಥಾಪಕರಾದ ಅಶೋಕ್ ಕುಮಾರ್ ಅವರು ಬಹುಮಾನ ವಿತರಿಸಿ, ಸಂಸ್ಥೆಯ ವತಿಯಿಂದ ಜನೋಪಯೋಗಿ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು. ಕವನ ಮತ್ತು ಸಣ್ಣ ಕಥೆ ಸ್ಪರ್ಧಾ ಪ್ರಯೋಜಕತ್ವನ್ನು ಪುಂಜಾಲಕಟ್ಟೆ ಬಸವನಗುಡಿ ಶ್ರೀ ದುರ್ಗಾ ಎಲೆಕ್ಟ್ರಾನಿಕ್ಸ್ & ಫರ್ನಿಚರ‍್ಸ್ ಮಾಲಕ ಹಾಗೂ ಬೆಳ್ತಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ ಇವರು ನೀಡಿ, ಯುವ ಸಾಹಿತಿ ಹಾಗೂ ಬರಹಗಾರರನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಇನ್ನುಳಿದ ಸ್ಪರ್ಧಾ ವಿಜೇತರಿಗೂ ಸಂಸ್ಥೆಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್ ಸ್ವಾಗತಿಸಿದರು. ಉಪಸಂಪಾದಕ ಸಂತೋಷ್ ಪಿ. ಕೋಟ್ಯಾನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯುವ ಸಾಹಿತಿ ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ಸುದ್ದಿ ಉದಯ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ತುಕರಾಮ್ ವಂದಿಸಿದರು. ಸಂಸ್ಥೆಯ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಗೌಡ ಹೊಸಪಟ್ನ, ಡಿಸೈನರ್ ಇರ್ಫಾನ್, ಅಕೌಂಟ್ಸ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಧಾ, ಆನ್‌ಲೈನ್ ವರದಿಗಾರ ಕು| ಪ್ರತಿಭಾ, ಕಂಪ್ಯೂಟರ್ ವಿಭಾಗದ ಕು| ಧನ್ಯ ಭಂಡಾರಿ, ಚಾನೆಲ್‌ನ ವರದಿಗಾರರಾದ ಕು| ಸೌಮ್ಯ ಮತ್ತು ಸುದೀತ್ ಕುಂಜರ್ಪ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಈ ಸಂದರ್ಭ ದೀಪಾವಳಿ ಹಬ್ಬದ ಅಂಗವಾಗಿ ಏರ್ಪಡಿಸಲಾದ ಲಕ್ಕೀ ಕೂಪನ್ ಡ್ರಾವನ್ನು ಅತಿಥಿಗಳು ನಡೆಸಿ ಫಲಿತಾಂಶವನ್ನು ಘೋಷಿಸಲಾಯಿತು.