ಬೆಳ್ತಂಗಡಿ: ಭವಿಷ್ಯದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಬೇಕಾದರೆ ಬಾಲ್ಯ ಮತ್ತು ಯೌವನದ ಜೀವನ ಪದ್ಧತಿ ಪ್ರಮುಖ ಘಟ್ಟವಾಗಿದೆ. ಮನೆಯಲ್ಲಿ ಬಾಲ್ಯದಲ್ಲಿ ಸಂಸ್ಕಾರ ದೊರೆತಾಗ ಮತ್ತು ಯೌವನದಲ್ಲಿ ಕಠಿಣ ಶಿಕ್ಷಣ ಪಡೆದಾಗ ಶ್ರೇಷ್ಠ ವ್ಯಕ್ತಿಗಳಾಗಬಹುದು. ಇಂದು ಎಕ್ಸೆಲ್ ಕಾಲೇಜಿನ ಸಂಸ್ಕಾರಯುತ ಶಿಕ್ಷಣ ಪದ್ಧತಿಯನ್ನು ನೋಡಿದಾಗ ಇಲ್ಲಿನ ವಿದ್ಯಾರ್ಥಿಗಳು ದೇಶದಲ್ಲಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವುದರಲ್ಲಿ ಯಾವುದೇ ಸಂದೇಹವಿಲ್ಲ. ವಿದ್ಯಾರ್ಥಿಗಳು ಈ ಅವಧಿಯಲ್ಲಿ ಶ್ರಮ ಪಟ್ಟು ಶಿಕ್ಷಣ ರೂಪಿಸುವುದರೊಂದಿಗೆ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಕೆ. ವೆಂಕಟರಮಣ ಅಸ್ರಣ್ಣ ಹೇಳಿದರು.
ಅವರು ಡಿ.23 ರಂದು ಗುರುವಾಯನಕೆರೆ ಎಕ್ಸೆಲ್ ಪಿ.ಯು ಕಾಲೇಜಿನ ಎಕ್ಸೆಲ್ ಪರ್ಬ 2023 ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ ವಿಜ್ಞಾನ ವಿಭಾಗವನ್ನು ಒಳಗೊಂಡು 5 ವರ್ಷದಲ್ಲಿ 1300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಂಸ್ಥೆಯಾಗಿ ಬೆಳೆದಿದೆ ಎಂದರೆ ಕಾಲೇಜಿನ ಶಿಕ್ಷಣದ ಗುಣಮಟ್ಟವನ್ನು ಗೌರವಿಸಬೇಕಾದದ್ದೆ. ಇಲ್ಲಿನ ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಪ್ರಾರಂಭವಾಗಿದೆ ಎಂದರೆ ದೀಪ ಪಾಪಗಳನ್ನು ನಿವಾರಿಸುವ, ದುಷ್ಟ ಶಕ್ತಿಗಳ ರಕ್ಷಣೆಗೆ ಮತ್ತು ಅನಾರೋಗ್ಯ ನಿವಾರಣೆಗೆ ಇರುವ ಜ್ಯೋತಕವಲ್ಲದೆ ಕತ್ತಲೆಯನ್ನು ಬೆಳಗಿಸುವ ಸಾಧನವಾಗಿದೆ. ಅದೇ ರೀತಿಯಲ್ಲಿ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ದೀಪದಂತೆ ಪ್ರಭಾವಿತರಾಗಿ ಎಂದರು.
ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದ.ಕ ಮತ್ತು ಉಡುಪಿ ಭಾಗ ಶಿಕ್ಷಣಕ್ಕೆ ಹೆಸರನ್ನು ಪಡೆದಿದ್ದು ಇಲ್ಲಿನ ಶಿಕ್ಷಣವನ್ನು ದೇಶ-ವಿದೇಶಗಳಲ್ಲೂ ಗೌರವಿಸುತ್ತಾರೆ. ವಿದ್ಯಾರ್ಥಿಗಳಿಗೆ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿರುವ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಪುಂಜಾಲಕಟ್ಟೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ರಾಜ್ ವೀರ್ ಇಂದ್ರ ಮಾತನಾಡಿ ವಿದ್ಯಾರ್ಥಿಗಳು ಒತ್ತಡದ ಶಿಕ್ಷಣಕ್ಕೆ ಒಳಗಾಗದೆ ಶಿಕ್ಷಣವನ್ನು ಪ್ರೀತಿಸಿ ಕಲಿಯಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಫಲ ಅವಕಾಶವಿದ್ದು ಇದನ್ನು ಸಾಧಿಸಲು ಮುಂದಾಗಬೇಕು. ಭಾರತೀಯ ಶಿಕ್ಷಣಕ್ಕೆ ಪ್ರಪಂಚದಾದ್ಯಂತ ಮೌಲ್ಯವಿದ್ದು ವಿದೇಶಿಗರು ಭಾರತೀಯ ಉದ್ಯೋಗಿಗಳು ಬರುವುದನ್ನು ಕಾಯುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ತಪ್ಪು ದಾರಿಗೆ ಹೋಗದೆ ಭವಿಷ್ಯ ರೂಪಿಸಿಕೊಳ್ಳಿ ಎಂದರು.
ಕಲ್ಪತರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಫಾ| ಜೋಸೆಫ್ ವಲಯ ಪರಂಬಿಲ್, ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರ ದೇಜಪ್ಪ ಬಾಚಕೆರೆ, ಜಾರಿಗೆಬೈಲು ಜುಮ್ಮಾ ಮಸೀದಿಯ ಧರ್ಮಗುರು ಜನಬ್ ಮಹಮ್ಮದ್ ಯಾಸಿರ್ ಶುಭಹಾರೈಸಿದರು. ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ,ಕಾರ್ಯದರ್ಶಿ ಅಬ್ರಹಾಂ ಬಿ.ಎಸ್, ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ. ನವೀನ್ ಕುಮಾರ್ ಎಂ ಸ್ವಾಗತಿಸಿ ಪ್ರಸ್ತಾಪಿಸಿದರು. ಉಪನ್ಯಾಸಕರುಗಳಾದ ವಿಕಾಸ್ ಹೆಬ್ಬಾರ್, ರಂಜಿತ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ನಾರಾಯಣ ಪೈಲಾಯ ವಂದಿಸಿದರು.