ಉಜಿರೆ: ವಿಜ್ಞಾನವೇ ಎಲ್ಲ ಶಿಕ್ಷಣದ ಭದ್ರ ತಳಪಾಯ. ಶಿಕ್ಷಣದ ಜತೆಗೆ ಜ್ಞಾನ ಸಂಪಾದನೆಯೇ ಬದುಕಿನ ಶ್ರೇಷ್ಠ ಸಂಪತ್ತು. ವಿದ್ಯಾರ್ಥಿ ಜೀವನದಲ್ಲಿ ಲಭ್ಯ ಎಲ್ಲ ಜ್ಞಾನವನ್ನೂ ಅರಗಿಸಿಕೊಂಡು ಅಪೂರ್ವ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಎಸ್ ಡಿ.ಎಂ. ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಸೃಜನಶೀಲ ಅಭಿರುಚಿ,ಹವ್ಯಾಸಗಳನ್ನು ಪೋಷಿಸಿ ,ಬೆಳೆಸುತ್ತಿದೆ. ಕೇಂದ್ರ ಸರಕಾರ ವಿಶೇಷ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಪ್ರಾಧಾನ್ಯತೆ ನೀಡುತ್ತಿದೆ .ವಿದ್ಯಾರ್ಥಿಗಳು ಭವಿಷ್ಯದ ಬಗೆಗೆ ಸಮರ್ಪಕ ನಿರ್ಧಾರ ತೆಗೆದುಕೊಂಡು ಸರಿದಾರಿಯಲ್ಲಿ ಮುನ್ನಡೆಯಬೇಕು ಎಂದು ಸುರತ್ಕಲ್ ನ ದ.ಕ. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಹೇಳಿದರು.
ಅವರು ಡಿ 29 ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನ ಮೇಳ “ಎಕ್ಸ್ ಪೀರಿಯ -2023 “ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಎಸ್ ಡಿ.ಎಂ.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ|ಸತೀಶ್ಚಂದ್ರ ಎಸ್ . ಅವರು ಸಮ್ಯಕ್ ದರ್ಶನ,ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯದಿಂದ ಸಮರ್ಪಣಾ ಭಾವ ಮತ್ತು ಪರಿಶ್ರಮದ ಶಿಕ್ಷಣ ಅಧ್ಯಯನದಿಂದ ಬದುಕಿನಲ್ಲಿ ಎತ್ತರದ ಗುರಿ ತಲುಪಲು ಸಾಧ್ಯ. ವಿದ್ಯಾರ್ಥಿಗಳು ಉನ್ನತ ಗುರಿ ಹೊಂದಿ ಅದರ ಸಾಧನೆಯ ಗೆಲುವಿಗೆ ನಿರಂತರ ಪರಿಶ್ರಮಪಡಬೇಕು ಎಂದರು.
ಸ್ವಾಗತಿಸಿ,ಪ್ರಸ್ತಾವಿಸಿದ ಕಾಲೇಜು ಪ್ರಾಚಾರ್ಯ ಡಾ!ಅಶೋಕ್ ಕುಮಾರ್ ಟಿ. ಎರಡು ದಿನಗಳ ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ರಸಪ್ರಶ್ನೆ,ಗಣಿತ ಒಗಟು,ಹ್ಯಾಕಥಾನ್,ವಿಜ್ಞಾನ ಮಾದರಿ ತಯಾರಿ,ಟ್ರೆಶರ್ ಹಂಟ್ ಮುಂತಾದ ಸ್ಪರ್ಧೆಗಳ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಪೂರ್ಣಿಮಾ ಜೈನ್ ಮತ್ತು ಮನಿಷಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜಕ ,ಸಿವಿಲ್ ಎಂಜಿನೀಯರಿಂಗ್ ವಿಭಾಗ ಮುಖ್ಯಸ್ಥ ಡಾ!ರವೀಶ್ ಪಿ.ವಂದಿಸಿದರು.