ಭೂಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿದ್ದ ಸೋಮಂತಡ್ಕ ನಿವಾಸಿ ಫ್ರಾನ್ಸಿಸ್ ಜೆ. ನಿವೃತ್ತಿ‌

Suddi Udaya

ಬೆಳ್ತಂಗಡಿ: ಮೂಲತಃ ಧರ್ಮಸ್ಥಳ ಗ್ರಾಮದ ನೇರ್ತನೆ ನಿವಾಸಿ, ಪ್ರಸ್ತುತ ಸೋಮಂತಡ್ಕ ದಲ್ಲಿ ನೆಲೆಸಿರುವ ಭೂ ಸೇನೆಯ ಯೋಧ ಫ್ರಾನ್ಸಿಸ್ ಜೆ ಅವರು ಭಾರತೀಯ ಭೂ ಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ಡಿ.31 ರಂದು ನಿವೃತ್ತರಾಗಿದ್ದಾರೆ‌.


ಧರ್ಮಸ್ಥಳದ ಎಬ್ರಿಯಲ್ ಇ.ಎಮ್ ಮತ್ತು ಇ.ಎಮ್ ಮೋರಿ ದಂಪತಿಯ ಪುತ್ರರಾಗಿರುವ ಅವರು ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿ, ಮುಂಡಾಜೆ ಪ.ಪೂ ಕಾಲೇಜಿನಲ್ಲಿ ಪ.ಪೂ ಶಿಕ್ಷಣ ಪಡೆದಿದ್ದಾರೆ. 2002 ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕಾತಿ ಒಡೆದು ಅವರು ಭೋಪಾಲ್ ನಲ್ಲಿ ಇಲೆಕ್ಟ್ರಾನಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿ ಅದೇ ವಿಭಾಗದಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದಾರೆ.


ಭೋಪಾಲ್ ನಲ್ಲಿ‌ ಸಿಪಾಯಿ ಹುದ್ದೆಯಲ್ಲಿ ಸೇನಾ ತರಬೇತಿ ಮುಗಿಸಿದ್ದ ಅವರು ಮಧುರಾ(ಯು.ಪಿ), ದೆಹಲಿ, ಸಿಲಿಗುಡಿ(ಪ. ಬಂಗಾಳ), ಸಿಕಂದರಾಬಾದ್ ಶ್ರೀನಗರ, ರಾಜಸ್ಥಾನ, ಬುಜ್ (ಗುಜರಾತ್), ಇಲ್ಲೆಲ್ಲಾ ಕರ್ತವ್ಯ ಸಲ್ಲಿಸಿ ಹವಾಲ್ದಾರ್ ಹುದ್ದೆಗೇರಿ ನಿವೃತ್ತರಾಗಿದ್ದಾರೆ.


ಅವರ ಕರ್ತವ್ಯದ ಅವಧಿಯಲ್ಲಿ ಅವರಿಗೆ 9 ವರ್ಷದ ಸೇವೆಗೆ ಪದಕ, 20 ವರ್ಷ ಸೇವೆಗೆ ಪದಕ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಚದ ಪದಕ, ಶ್ರೀ ನಗರ ಆರ್ ಆರ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಕ್ಕಾಗಿ ಪದಕ ಪುರಸ್ಕೃತರಾಗಿದ್ದಾರೆ. ಅವರು ಪತ್ನಿ ಬೀನಾ ಫ್ರಾನ್ಸಿಸ್, ಮೂವರು ಮಕ್ಕಳಾದ ಫಿಯಾ ಫ್ರಾನ್ಸಿಸ್, ಫೆಬಿನ್ ಫ್ರಾನ್ಸಿಸ್ ಮತ್ತು ಅನ್ವಿರೋಸ್ ಫ್ರಾನ್ಸಿಸ್ ಅವರ ಜೊತೆ ನಿವೃತ್ತಿಯ ಜೀವನ ಸಾಗಿಸಲಿದ್ದಾರೆ.
ಭವ್ಯ ಸ್ವಾಗತ:‌ ಅವರು ಕರ್ತವ್ಯ ಸಲ್ಲಿಸಿ ಊರಿಗೆ ಆಗಮಿಸುತ್ತಿದ್ದಂತೆ ಉಜಿರೆ ಹಾಗೂ ಸೋಮಂತಡ್ಕದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

Leave a Comment

error: Content is protected !!