ಬೆಳ್ತಂಗಡಿ : ಗಲಾಟೆ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಕಳೆದ ಐದು ವರ್ಷಗಳಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಅ.ಕ್ರ 178/18 u/s 323,325 IPC ಗಲಾಟೆ ಪ್ರಕರಣ ನಡೆದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೇ ಐದು ವರ್ಷಗಳ ಕಾಲ ಊರು ಬಿಟ್ಟು ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಪುತ್ತೂರು ತಾಲೂಕಿನ ಕಲ್ಲಗುಡ್ಡೆ, ನೂಜಿಬಾಲ್ತಿಲ ಗ್ರಾಮದ ಮಂಜೋಲಿ ನಿವಾಸಿ ವರ್ಗೀಸ್ ಯಾನೆ ರಾಜನ್ ಎಂಬವರ ಪುತ್ರ ಪ್ರಬೀನ ಯಾನೆ ಪ್ರವೀಣ(34) ಎಂಬಾತ ಊರಿಗೆ ಬಂದಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಜನವರಿ 11ರಂದು ಮದ್ಯಾಹ್ನ 1 ಗಂಟೆಗೆ ಪುತ್ತೂರು ತಾಲೂಕು ನೂಜಿಬಾಲ್ತಿಲ ಬಸ್ಸು ತಂಗುದಾಣದ ಬಳಿ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿಹಾಗೂ ಧರ್ಮಸ್ಥಳ ಠಾಣಾ ಪೊಲೀಸ್ ಉಪ-ನಿರೀಕ್ಷಕರಾದ ಅನಿಲ್ ಕುಮಾರ್ ಡಿ. ಮಾರ್ಗದರ್ಶನದಂತೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿ ರಾಜೇಶ್.ಎನ್ ಮತ್ತು ಗೋವಿಂದ ರಾಜ್ ರವರು ಆರೋಪಿಯನ್ನು ಬಂಧಿಸಿ ಬೆಳ್ತಂಗಡಿ ಜೆಮ್ ಎಫ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.