ಬೆಳ್ತಂಗಡಿ: 8 ವರ್ಷದ ಹಿಂದೆ ಸಿಗೂಢವಾಗಿ ನಾಪತ್ತೆಯಾದ ಗುರುವಾಯನಕರೆಯ ಏಕನಾಥ ಶೆಟ್ಟಿ ಸಹಿತ 29 ಸೈನಿಕರಿದ್ದ ಭಾರತೀಯ ಏರ್ ಫೋರ್ಸ್ ವಿಮಾನದ ಕುರುಹು ಪತ್ತೆಯಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಬಗ್ಗೆ ಏಕನಾಥ ಶೆಟ್ಟಿಯವರ ಮನೆಯವರಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಸೇನಾ ಕರ್ತವ್ಯದ ನಿಮಿತ್ತ ಚೆನ್ನೈಯ ತಾಂಬರಂ ವಾಯು ನೆಲೆಯಿಂದ ಅಂಡಮಾನ್ ಪೋರ್ಟ್‌ಭೇರ್‌ಗೆ 2016ರ ಜುಲೈ 22ರಂದು ಪ್ರಯಾಣ ಬೆಳೆಸಿದ್ದ ಭಾರತೀಯ ಏರ್ ಪೋಸ್೯ ವಿಮಾನ ಬಂಗಾಲಕೊಲ್ಲಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಡಿತಗೊಂಡಿತ್ತು. ಅದರಲ್ಲಿದ್ದ ಗುರುವಾಯನಕೆರೆಯ ಏಕನಾಥ ಶೆಟ್ಟಿ ಸೇರಿ 29 ಜನ ಸೈನಿಕರ ಸುಳಿವು ಇಂದಿಗೂ ನಿಗೂಢವಾಗಿದೆ. ಬೆಳಗ್ಗೆ 8.30ಕ್ಕೆ ವಿಮಾನ ಹೊರಟಿದ್ದು 9.12ಕ್ಕೆ ನಿಲ್ದಾಣದೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. 11.45ಕ್ಕೆ ಪೋರ್ಟ್‌ಭೇರ್‌ಗೆ ತಲುಪಬೇಕಿದ್ದ ವಿಮಾನ ಕಣ್ಮರೆಯಾಗಿರುವುದಾಗಿ ಮಧ್ಯಾಹ್ನ 1.50ಕ್ಕೆ ವಾಯುಸೇನೆ ಪ್ರಕಟಿಸಿತ್ತು. ಪತ್ತೆಗಾಗಿ ಕೇಂದ್ರ ಸರಕಾರ ಹಾಗೂ ಮಿಲಿಟರಿ ತಜ್ಞರು ಸತತ ಮೂರು ತಿಂಗಳು ನಡೆಸಿದ್ದ ಯತ್ನಗಳು ವಿಫಲವಾದವು.
ಇದಕ್ಕಾಗಿ ಎರಡು ಪಿ-8ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ವಿಮಾನವೊಂದು ಕುರುಹೇ ಇಲ್ಲದಂತೆ ನಾಪತ್ತೆಯಾಗಿರುವುದು ವಾಯುಪಡೆಯ
ಇತಿಹಾಸದಲ್ಲೇ ಇದು ಮೊದಲಾಗಿತ್ತು
ಈ ನಾಪತ್ತೆಯಾದ ವಿಮಾನದ ಅವಶೇಷ ಇದೀಗ ಪತ್ತೆಯಾಗಿದೆ ಎಂದು ವಾಯುಸೇನಾ ಪ್ರಕಟನೆ ಹೊರಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಬಗ್ಗೆ ಮನೆಯವರಿಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿದ್ದಾರೆ.