ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಹೊಸಂಗಡಿಯ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಲಾ ವಠಾರದಲ್ಲಿ ಸಂಭ್ರಮದಿಂದ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ, ವ್ಯವಸಾಯ ಸೇವಾ ಸಹಕಾರಿ ಸಂಘದ ಪೆರಾಡಿ ಇದರ ನಿರ್ದೇಶಕ ಸೀತಾರಾಮ ರೈ ಇವರು ಶಾಲೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಕಾರ್ಯಕ್ರಮಕ್ಕೆ ಹಾಗೂ ಶಾಲಾ ಮಕ್ಕಳಿಗೆ ಶುಭ ಹಾರೈಸಿದರು. ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಧರಣೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿ, ಶಾಲೆಗೆ ಬೇಕಾದ ಮೂಲ ಸೌಕರ್ಯಗಳ ಬಗ್ಗೆ ಸರಕಾರ ಮಟ್ಟದಲ್ಲಿ ಗಮನಕ್ಕೆ ತಂದು ಕಾರ್ಯರೂಪಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿಯ ಶಿಕ್ಷಕ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿಯಾದ ರಾಜೇಶ್ ನೆಲ್ಯಾಡಿಯವರು ಮಾತನಾಡಿ ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು. ಮಕ್ಕಳಿಗೆ ಕಥೆಯ ಮೂಲಕ ಮೌಲ್ಯಯುತವಾದ ಸಂದೇಶದ ಜೊತೆಗೆ ತಂತ್ರಜ್ಞಾನದ ಒಳಿತು ಕೆಡುಕುಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ರಾಜ್ಯ ಮಟ್ಟದ ಕಬಡ್ಡಿ ತರಬೇತುದಾರರಾದ ಜಯಂತ್, ಶಾಲಾ ನಾಯಕ ಮಹಾಂತೇಶ್, ಶಾಲಾ ನಾಯಕಿ ಲತಾ ಅನ್ವಿತಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎರಡನೇ ದಿನ ಪ್ರೌಢಶಾಲಾ ವಿಭಾಗದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯ ಹರಿಪ್ರಸಾದ್ ಇವರು ಮಾತನಾಡಿ ಶಿಕ್ಷಣ ಪಡೆಯುವುದರಿಂದ ಪ್ರತಿಯೊಬ್ಬ ನಾಗರಿಕನೂ ದೇಶದ ಸಂಪತ್ತು ಆಗಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷರಾದ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಅವರು ಈ ಶಾಲೆಗೆ ಸೇರಿಸಿದ ಮಕ್ಕಳ ಪೋಷಕರು ಪುಣ್ಯವಂತರು. ಇಲ್ಲಿ ಒಳ್ಳೆಯ ಶಿಕ್ಷಣ, ಸಂಸ್ಕಾರ ಮಕ್ಕಳಿಗೆ ದೊರಯುತ್ತಿದೆ . ಈ ಶಾಲೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿಗಲು ಪಂಚಾಯತ್ ಮಟ್ಟದಲ್ಲಿ ಆಗುವ ಕೆಲಸವನ್ನು ನನ್ನ ಕೈಲಾದಷ್ಟು ಮಾಡಿಕೊಡುತ್ತೇನೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಇವರು, ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದ ಕೂಡಲೇ ನಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿದುಕೊಳ್ಳದೇ ಮಕ್ಕಳ ಶಿಕ್ಷಣದ ಬಗ್ಗೆ ಗಮನ ಹರಿಸುವುದು ಮುಖ್ಯವಾದುದ್ದು. ಪಾಠದ ಜೊತೆಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಕ್ಕಳಿಗೆ ಪ್ರೋತ್ಸಾಹದ ಮಾತುಗಳಾಡಿದರು. 2024-25ರ ಸಾಲಿನ ವಿಶೇಷ ಸಾಮರ್ಥ್ಯದ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ಕಿರಣ್. ಕೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.

ಸಮಾರಂಭದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಲಾ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಇವರು, ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಶಾಲಾ ವಿದ್ಯಾರ್ಥಿಗಳು ಹಾಗೂ, ಪೋಷಕರ ಸಹಕಾರದಿಂದ ಪ್ರಪ್ರಥಮ ಪ್ರತಿಭಾ ಪುರಸ್ಕಾರ ಯಶಸ್ವಿಯಾಗಲು ಸಾಧ್ಯವಾಯಿತು ಎಂದು ನುಡಿದರು. ವಿವಿಧ ಸ್ಪರ್ಧೆಗಳು, ಕಲಿಕೆ ಮೊದಲಾದ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರಿಂದ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ವಿತರಿಸಿದರು. ಕ್ರೀಡಾಸ್ಪರ್ಧೆಯ ಬಹುಮಾನ ವಾಚನವನ್ನು ದೈಹಿಕ ಶಿಕ್ಷಕಿ ನಳಿನಾಕ್ಷಿ ನೆರವೇರಿಸಿದರು. ಸಾಂಸ್ಕೃತಿಕ ಸ್ಪರ್ಧೆಯ ಬಹುಮಾನ ವಾಚನವನ್ನು ಶಿಕ್ಷಕಿ ಕುಮಾರಿ ನಯನಾ ಮತ್ತು ಶಿಕ್ಷಕಿ ಅಶ್ವಿನಿ ಅವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಕ್ಷಕ ಸುಧೀರ್ ಬಾಳೆಪುಣಿ ಮತ್ತು ಶಿಕ್ಷಕಿ ವಿದ್ಯಾಲತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿತಾ ಸ್ವಾಗತಿಸಿದರು. ಶಿಕ್ಷಕಿ ಕುಮುಜಾಕ್ಷಿ ಮತ್ತು ಶಿಕ್ಷಕಿ ಸುನಿತಾ ಜಿ ರಾವ್ ವಂದಿಸಿದರು.

Leave a Comment

error: Content is protected !!