ಉಜಿರೆ ಪೇಟೆಯಲ್ಲಿ ಪಾರ್ಕಿಂಗ್ ಸುವ್ಯವಸ್ಥೆ ಕುರಿತು ಸಭೆ

Suddi Udaya

ಉಜಿರೆ: ಉಜಿರೆ ಪೇಟೆಯ ಅವ್ಯವಸ್ಥಿತ ಪಾರ್ಕಿಂಗ್ ನಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಗ್ರಾಮ ಪಂಚಾಯಿತಿ ವಠಾರದಲ್ಲಿ ಪಂಚಾಯಿತ್ ಅಧ್ಯಕ್ಷೆ ಉಷಾಕಿರಣ ಕಾರಂತ್ ಅವರ ಅಧ್ಯಕ್ಷತೆಯಲ್ಲಿ ಜ.17ರಂದು ವಿಶೇಷ ಸಭೆ ಜರಗಿತು.

ಪಂಚಾಯಿತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್ ಐ ಅರ್ಜುನ್, ವರ್ತಕರು,ವಾಹನ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು, ಕಾರ್ಯದರ್ಶಿ ಶ್ರವಣ್ ಕುಮಾರ್ ಉಪಸ್ಥಿತರಿದ್ದರು.


ಉಜಿರೆ ಪೇಟೆಯ ಕಾಲೇಜು ರಸ್ತೆಯಲ್ಲಿ ಹಾಗೂ ಫುಟ್ ಪಾತ್ ನಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ತಾತ್ಕಾಲಿಕ ಅಂಗಡಿಗಳು ತಲೆ ಎತ್ತುತ್ತಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚಾರಕ್ಕೆ ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ವಿಚಾರ ಪ್ರಸ್ತಾಪವಾಯಿತು. ಫುಟ್ ಪಾತ್ ಮೇಲೆ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ಕ್ರಮ ಹಾಗೂ ತಾತ್ಕಾಲಿಕ ವ್ಯಾಪಾರ ನಿರ್ವಹಿಸುವುದನ್ನು ನಿರ್ಬಂಧಿಸುವ ಕುರಿತು ನಿರ್ಣಯಿಸಿ,ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು.


ಕಾಲೇಜು ರಸ್ತೆ ಕೆಲವು ಕಡೆ ಬೇಕಾಬಿಟ್ಟಿ ವಾಹನ ಪಾರ್ಕಿಂಗ್ ಮಾಡುವುದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಮೂರು ಕಡೆಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸುವ ನಿರ್ಣಯ ಕೈಗೊಳ್ಳಲಾಯಿತು.
ಅಂಗಡಿಗಳ ಮುಂಭಾಗ ವಾಹನ ಪಾರ್ಕಿಂಗ್ ಮಾಡಿ ಗ್ರಾಹಕರಿಗೆ ಹಾಗೂ ವರ್ತಕರಿಗೆ ತೊಂದರೆ ನೀಡುವವರ ವಿರುದ್ಧ ಪೊಲೀಸ್ ಇಲಾಖೆ ಸಹಕಾರದಲ್ಲಿ ದಂಡ ವಿಧಿಸುವ ಕುರಿತು ನಿರ್ಣಯಿಸಲಾಯಿತು.
ಖಾಸಗಿ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿ ತೊಂದರೆ ನೀಡುವವರ ವಿರುದ್ಧವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಭೆಗೆ ತಿಳಿಸಲಾಯಿತು.


ಬಸ್ ನಿಲ್ದಾಣಗಳಲ್ಲಿ ಬಾಡಿಗೆ ವಾಹನಗಳನ್ನು ನಿಲ್ಲಿಸುವವರಿಗೆ ಕಡಿವಾಣ ಹಾಕುವ ಕುರಿತು ಚರ್ಚೆ ನಡೆಯಿತು. ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ಕಾರ್ಯಕ್ರಮ ನಿರ್ವಹಿಸಿದರು.

Leave a Comment

error: Content is protected !!